

ವಿಜಯಪುರ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಯುವ ಜನತೆ ಎಐಡಿವೈಒ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಸಹಿ ಸಂಗ್ರಹದ ಅಭಿಯಾನದಂಗವಾಗಿ ಗುರುವಾರ ಸಹಿ ಸಂಗ್ರಹಿಸಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಎಐಡಿವೈಒನ ಜಿಲ್ಲಾ ಕಾರ್ಯದರ್ಶಿ ಸಿದ್ರಾಮಯ್ಯ ಹಿರೇಮಠ ಮಾತನಾಡಿ, ಯುವ ಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಇಡೀ ಸಮಾಜವೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದೆ. ಆಳ್ವಿಕರು ಈ ಬಿಕ್ಕಟ್ಟನ್ನು ಪರಿಹರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ, ಬದಲಿಗೆ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಾ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದ್ದಾರೆ. ನಿರುದ್ಯೋಗ ಮತ್ತು ಭ್ರಷ್ಟಾಚಾರ ತೀವ್ರವಾಗಿ ಹೆಚ್ಚುತ್ತಿದೆ. ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಉದ್ಯೋಗಾಕಾಂಕ್ಷಿಗಳು ಉತ್ತರಾಖಂಡದ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರದಲ್ಲಿ ಉದ್ಯೋಗಕ್ಕಾಗಿ ಸಾವಿರಾರು ಯುವಕರು ಬೀದಿಗಿಳಿದಿದ್ದಾರೆ. ಲಡಾಖ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿಯೂ ನಿರುದ್ಯೋಗವು ಪ್ರಮುಖ ಸಮಸ್ಯೆಯಾಗಿದೆ ಎಂದರು.
2023 ರಲ್ಲಿ ಭಾರತದಲ್ಲಿ 10,786 ರೈತರು ಆತ್ಮಹತ್ಯೆ ಮಾಡಿಕೊಂಡರು ಮತ್ತು ಅದೇ ಅವಧಿಯಲ್ಲಿ 14,234 ನಿರುದ್ಯೋಗಿ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ರೈತರ ಆತ್ಮಹತ್ಯೆಗಳಿಂದಾಗಿ ಭಾರತವು ಬಹಳ ಹಿಂದಿನಿಂದಲೂ ಕುಖ್ಯಾತವಾಗಿದೆ, ಆದರೆ ಈಗ ನಿರುದ್ಯೋಗಿಗಳ ಆತ್ಮಹತ್ಯೆಯು ಅದನ್ನೂ ಮೀರಿಸಿದೆ ಎಂಬುದು ಆಘಾತಕಾರಿ ಮತ್ತು ನೋವಿನ ಸಂಗತಿ ಎಂದರು.
ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ ಮಾತನಾಡಿ, 2025 ಜು. 24 ರ ಹೊತ್ತಿಗೆ, ಕೇಂದ್ರ ಸರ್ಕಾರದ 78 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದವು ಎಂದು ಹಣಕಾಸು ಸಚಿವಾಲಯದ ವರದಿ ಬಹಿರಂಗಪಡಿಸಿದೆ. ರೈಲ್ವೆ ಇಲಾಖೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಲ್ಲಾ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ, ರಾಜ್ಯ ಸರ್ಕಾರಗಳು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದರು.
2025-26 ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನಗಳು ನಡೆಯುತ್ತಿಲ್ಲ. ಒಂದಿಲ್ಲೊಂದು ನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ ಎಂದು ಹರಿಹಾಯ್ದರು.
ಚೇತನ ರಾಠೋಡ, ಪ್ರದೀಪ ಕಂಟೀಕರ್, ಶಶಿಕುಮಾರ ತೋಟದ, ಅರವಿಂದ ರಾಠೋಡ, ರವಿ ಹೊಸಮನಿ, ಶೋಬಾ ಬಿದರಿ, ಕಾವೇರಿ ಚವಾಣ್, ವಿಜಯ ಪವಾರ, ಮಂಜುನಾಥ ಬಬಲೇಶ್ವರ, ರಿಯಾಜ್ ಹಿಪ್ಪರಗಿ, ದರ್ಶನ ಉಪ್ಪಾರ, ಸಚಿನ ದೊಡಮನಿ ಮತ್ತಿತರರಿದ್ದರು.