

ನವದೆಹಲಿ: ತಮ್ಮ ನೇರ-ನಿಷ್ಟೂರ ಮಾತುಗಳಿಂದಲೇ ಕ್ರೀಡಾ ಜಗತ್ತಿನಲ್ಲಿ ಸಖತ್ ಫೇಮಸ್ ಆಗಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯಗಳು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಗೌತಮ್ ಗಂಭೀರ್ ಟೀಮ್ ಇಂಡಿಯಾ ನೂತನ ಕೋಚ್ ಆಗಿ ನೇಮಕಗೊಳ್ಳುತ್ತಿದ್ದಂತೆ ಮೊದಲ ಬಾರಿಗೆ ಮಾತನಾಡಿರುವ ಗಾವಸ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ ಈ ಒಬ್ಬ ಆಟಗಾರನ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದಾರೆ. ತಮ್ಮ ಮನವಿಯನ್ನು ಪರಿಗಣಿಸುವಂತೆ ಆಯ್ಕೆ ಸಮಿತಿಗೆ ವಿನಂತಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗವಾಸ್ಕರ್ ವೈಟ್ ಬಾಲ್ನಂತೆ ಭಾರತ ತಂಡವು ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್ ಪಾಂಡ್ಯ ಕೆಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಅವರನ್ನು ಟೆಸ್ಟ್ ಕ್ರಿಕೆಟ್ಗೆ ಮರಳಿ ಬಂದರೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಮಾಡಿದ ಜಾದೂವನ್ನೇ ಇಲ್ಲೂ ಕೂಡ ಮಾಡಲಿದ್ದಾರೆ.
ಹಾರ್ದಿಕ್ ಆರು ವರ್ಷಗಳ ಹಿಂದೆ ಟೆಸ್ಟ್ ಸರಣಿ ಆಡಿದ್ದರೂ ಅದಾದ ಬಳಿಕ ಅವರು ರೆಡ್ಬಾಲ್ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಈವರೆಗೂ 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಪಾಂಡ್ಯ ಅವರು ಉತ್ತಮ ಪ್ರದರ್ಶನ ನೀಡಿದ್ದು, ಒಂದು ವೇಳೆ ಟೆಸ್ಟ್ ಕ್ರಿಕೆಟ್ಗೆ ಮರಳಿದರೆ ತಂಡದ ಪರ ದೊಡ್ಡ ಇಂಪ್ಯಾಕ್ಟ್ ಮಾಡಲಿದ್ದಾರೆ. ಕೂಡಲೇ ನೂತನ ಕೋಚ್ ಗೌತಮ್ ಗಂಭೀರ್ ಅವರ ಮನವೊಲಿಸಬೇಕೆಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.
ಐಪಿಎಲ್ ಶುರುವಾಗುವುದಕ್ಕೂ ಮುಂಚಿನಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಅವರು ಟೆಸ್ಟ್ ಕ್ರಿಕೆಟ್ಗೆ ಮರಳಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಇದು ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.