ನವದೆಹಲಿ: ಚುಟುಕು ವಿಶ್ವ ಸಮರದಲ್ಲಿ ಗೆದ್ದು ಭಾರೀ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಸಜ್ಜಾಗುತ್ತಿದೆ. 2013ರಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನಾಯಕತ್ವದಲ್ಲಿ ಕಡೆಯದಾಗಿ ಟ್ರೋಫಿ ಎತ್ತಿ ಹಿಡಿದ್ದ ಭಾರತ, 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿತ್ತು. ಈ ಬಾರಿಯ ಟೂರ್ನಿಯಲ್ಲಿ ಗೆದ್ದು ಕಪ್ಅನ್ನು ವಾಪಸ್ ತರುವ ಬಗ್ಗೆ ರೋಹಿತ್ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವೆಂಬಂತೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಹುಮ್ಮಸ್ಸಿನಲ್ಲಿರುವ ಆಟಗಾರರು ಈ ಬಾರಿಯ ಟ್ರೋಫಿಯನ್ನು ತವರಿಗೆ ತರುವ ಸಂಕಲ್ಪವನ್ನು ತೊಟ್ಟಿದ್ದು, ಅದಕ್ಕೆ ಪೂರಕವಾಗಿ ನೂತನ ಕೋಚ್ ಮಾರ್ಗದರ್ಶನದಲ್ಲಿ ತಯಾರಿ ಆರಂಭಿಸಿದ್ದಾರೆ. ಆದರೆ, ಈ ಬಾರಿಯ ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡ ಭಾಗವಹಿಸುವುದು ಡೌಟ್ ಎಂದು ಹೇಳಲಾಗಿದೆ. ಈಗಾಗಲೇ ಬಿಸಿಸಿಐ ಪಾಕಿಸ್ತಾನಕ್ಕೆ ಆಟಗಾರರನ್ನು ಕಳುಹಿಸುವ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಮನವಿ ಮಾಡಿದೆ. ಐಸಿಸಿ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ಏಕೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಅನೇಕ ವರ್ಷಗಳಿಂದ ವರ್ಷ ಕಳೆದಂತೆ ಉಲ್ಬಣಗೊಳ್ಳುತ್ತಿದ್ದು, ಎರಡು ದೇಶಗಳು ಐಸಿಸಿ ನಡೆಸುವ ಟೂರ್ನಮೆಂಟ್ಗಳಲ್ಲಿ ಮುಖಾಮುಖಿಯಾಗುತ್ತಿವೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ಬಹಳ ವರ್ಷಗಳಾಗಿದ್ದು, ಪ್ರತಿ ಬಾರಿಯೂ ಈ ಎರಡು ತಂಡಗಳು ಮುಖಾಮುಖಿಯಾದಾಗ ಯುದ್ಧದಂತೆ ಭಾಸವಾಗುತ್ತದೆ. ಆದರೆ, ಭಾರತದ ಆಟಗಾರರನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಈಗಾಗಲೇ ಪಿಸಿಬಿ ಹಾಗೂ ಐಸಿಸಿಗೆ ಕಡ್ಡಿ ಮುರಿದಂತೆ ಹೇಳಿದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾ ತಮ್ಮ ದೇಶಕ್ಕೆ ಬರಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಆ ದೇಶದ ಕ್ರಿಕೆಟ್ ಅಭಿಮಾನಿಗಳು ಬಲವಾಗಿ ಬಯಸಿದ್ದಾರೆ. ಆದರೆ, ಟೀಮ್ ಇಂಡಿಯಾವನ್ನು ಅಲ್ಲಿಗೆ ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಕರಡು ವೇಳಾಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದೆ. 2025 ಮಾರ್ಚ್ 1 ರಂದು ಲಾಹೋರ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಭದ್ರತಾ ಕಾರಣಗಳಿಗಾಗಿ ಟೀಮ್ ಇಂಡಿಯಾ ಆಡುವ ಎಲ್ಲ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸಲಾಗುವುದು ಎಂದು ಹೇಳಿದೆ. ಆದರೆ, ಬಿಸಿಸಿಐ ಅದಕ್ಕೆ ಒಪ್ಪುತ್ತಿಲ್ಲ. ಟೀಮ್ ಇಂಡಿಯಾ ಆಡುವ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಿಸಿಸಿಐ ಈಗಾಗಲೇ ಐಸಿಸಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಆತ ಯಾರೆಂಬುದೇ ನನಗೆ ತಿಳಿದಿಲ್ಲ; ಭಾರತದ ಆಟಗಾರನ ಕುರಿತು ಯೂಟ್ಯೂಬರ್ನ ಪ್ರಶ್ನೆಗೆ ದಿಗ್ಗಜ ಫುಟ್ಬಾಲ್ ಆಟಗಾರನ ಉತ್ತರ ವೈರಲ್
ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ ಇರುವ ಕ್ರೇಜ್ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದೆ. ಬಹುತೇಕ ಟೀಮ್ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ.
ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳದೆ ಈ ಬಾರಿಯ ಚಾಂಪಿಯನ್ಸ್ ಟ್ರೋಪಿ ಆಡದಿದ್ದಲ್ಲಿ ಶ್ರೀಲಂಕಾ ತಂಡಕ್ಕೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಏಕದಿನ ವಿಶ್ವಕಪ್ 2023ರ ಅಂಕ ಪಟ್ಟಿಯಲ್ಲಿ ಶ್ರೀಲಂಕಾ ತಂಡವು 9ನೇ ಸ್ಥಾನದಲ್ಲಿದೆ. ಹೀಗಾಗಿ ಒಂದು ತಂಡ ಟೂರ್ನಿಯನ್ನು ಬಹಿಷ್ಕರಿಸಿದರೆ, ಅಂಕ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ತಂಡಕ್ಕೆ ಅವಕಾಶ ನೀಡಲಾಗುತ್ತದೆ. ಅದರಂತೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದರೆ ಶ್ರೀಲಂಕಾ ತಂಡವು ಟೂರ್ನಿಗೆ ಅರ್ಹತೆ ಪಡೆಯಲಿದೆ. ಚಾಂಪಿಯನ್ಸ್ ಟ್ರೋಪಿಯಲ್ಲಿ ಭಾರತ ಪಾಲ್ಗೊಳ್ಳುತ್ತಾ ಇಲ್ಲವಾ ಎಂದು ಕಾದು ನೋಡಬೇಕಿದೆ.