ರಾಹುಲ್​ ಗಾಂಧಿ ಹಿಂದು ಧರ್ಮವನ್ನು ಅವಮಾನಿಸಿಲ್ಲ, ಅವರ ಹೇಳಿಕೆಯನ್ನು ತಿರುಚಲಾಗಿದೆ: ಅವಿಮುಕ್ತೇಶ್ವರಾನಂದ ಶ್ರೀ

Rahul Hindu
Published on

ನವದೆಹಲಿ: ಇತ್ತೀಚಿಗೆ ನಡೆದ ಲೋಕಸಭೆ ಅಧಿವೇಶನದಲ್ಲಿ ವಿಪಕ್ಷ ನಾಯಕ ರಾಹುಲ್​ ಗಾಂಧಿ ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ. ಆದೇ ರೀತಿ ಹಿಂಸಾಚಾರ ಮಾಡುವವರು ಹಿಂದೂಗಳಲ್ಲ ಎಂದು ಹೇಳಿದ್ದರು. ಈ ಭಾಷಣ ಎನ್​ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ರಾಹುಲ್​ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಉತ್ತರಾಖಂಡ್‌ನ ಜ್ಯೋತಿಶ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀ ಪ್ರತಿಕ್ರಿಯಿಸಿದ್ದು, ರಾಹುಲ್​ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವಿಮುಕ್ತೇಶ್ವರಾನಂದ ಸ್ವಾಮೀಜಿ ರಾಹುಲ್​ ಗಾಂಧಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ನನಗೆ ಭಕ್ತರು ತಿಳಿಸಿದ ನಂತರ ನಾನು ಅವರ ಭಾಷಣದ ವಿಡಿಯೋವನ್ನು ನೋಡಿದೆ. ಭಾಷಣದಲ್ಲಿ ಅವರು ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡಿಲ್ಲ. ಅವರ ಹೇಳಿಕೆಯ ಆಯ್ದ ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ರಾಹುಲ್​ ಗಾಂಧಿ ಹಿಂದೂ ಧರ್ಮದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಹೇಳಿದ್ದಾರೆ. ಅದನ್ನು ಬಿಟ್ಟು ಭಾಷಣದ ಆಯ್ದ ಭಾಗವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸೌಹಾರ್ದತೆ ಕದಡುವ ಯತ್ನ ನಡೆಯುತ್ತಿದೆ. ಈ ರೀತಿ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಉತ್ತರಾಖಂಡ್‌ನ ಜ್ಯೋತಿಶ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್​ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಜುಲೈ 01ರಂದು ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾತನಾಡಿದ ರಾಹುಲ್​ ಗಾಂಧಿ ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ ಎಂದು ಟೀಕಿಸಿದ್ದರು. ಈ ಹೇಳಿಕೆಗೆ ಎನ್​ಡಿಎ ಮೈತ್ರಿಕೂಟದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೋಲಾಹಲ ಉಂಟಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ ಇಡೀ ಹಿಂದೂ ಸಮಾಜವು ಹಿಂಸಾಪ್ರವೃತ್ತಿಯಿಂದ ಕೂಡಿದೆ ಎಂದು ಕರೆಯುವುದು ತುಂಬಾ ಗಂಭೀರ ವಿಷಯವಾಗಿದೆ ಎಂದು ಹೇಳುವ ಮೂಲಕ ಕಿಡಿಕಾರಿದ್ದರು. ಇದಲ್ಲದೆ ರಾಹುಲ್​ ಗಾಂಧಿ ಸದನದಲ್ಲಿ ಬಿಜೆಪಿ-ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸುವಾಗ ಪ್ರಧಾನಿ ಮೋದಿ ಎರಡು ಬಾರಿ ಮಧ್ಯಪ್ರವೇಶಿಸಿ ಆಕ್ಷೇಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net