

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಪಾವತಿದಾರರಿಗೆ ಶಾಕ್ ನೀಡಿತ್ತು. ಇದೀಗ ಆದಾಯ ತೆರಿಗೆ ಕುರಿತಂತೆ ವ್ಯಕ್ತಿಯೊಬ್ಬರು ಮಾಡಿರುವ ಟ್ವೀಟ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ನವದೆಹಲಿಯ ನಿವಾಸಿ ಅಪೂರ್ವ್ ಜೈನ್ ಎಂಬುವವರು ತಾವು 1 ರೂಪಾಯಿ ತೆರಿಗೆ ಬಾಕಿ ಪಾವತಿಸದಿರುವುದಕ್ಕೆ ಆದಾಯ ತೆರಿಗೆ ಇಲಾಖೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಬಾಲಿ ಪಾವತಿ ಮಾಡಲು ತಾವು ಚಾರ್ಟರ್ಡ್ ಅಕೌಂಟೆಂಟ್ಗೆ ₹. 50 ಸಾವಿರ ಕಟ್ಟಿದ್ದಾಗಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಹಲವರು ಸರ್ಕಾರ ಹಾಗೂ ವ್ಯಕ್ತಿಯ ನಡೆಗೆ ಕಿಡಿಕಾರಿದ್ದಾರೆ.
ಈ ಘಟನೆಯು ಭಾರತದಲ್ಲಿ ತೆರಿಗೆ ವ್ಯವಸ್ಥೆಯನ್ನು ನ್ಯಾವಿಗೇಟ್ ಮಾಡುವ ಸಂಕೀರ್ಣತೆಗಳನ್ನು ಎತ್ತಿ ತೋರಿಸುತ್ತದೆ. ತೆರಿಗೆ ಪಾವತಿಯಲ್ಲಿ ಆಗುವ ಎಡವಟ್ಟುಗಳು ದೊಡ್ಡ ಮೊತ್ತದ ಶುಲ್ಕ ಕಟ್ಟುವಂತೆ ಮಾಡುತ್ತದೆ. ಕೆಲವರು ಇದು ಸರ್ಕಾರದ ಅಸಮರ್ಥತೆ ಎಂದು ಕಿಡಿಕಾರಿದರೆ. ಇನ್ನೂ ಕೆಲವರು ಚಾರ್ಟರ್ಡ್ ಅಕೌಂಟೆಂಟ್ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ತಮಾಷೆಯಂತೆ ಕಾಣುತ್ತಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಐಟಿ ಇಲಾಖೆಯವರು ಮುಂದಿನ ದಿನಗಳಲ್ಲಿ ರೈತರಿಗೂ ನೋಟಿಸ್ ಕಳುಹಿಸಿದರೆ ಅಚ್ಚರಿಪಡಬೇಕಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಪೂರ್ವ್ ಜೈನ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.