ಮಕ್ಕಳನ್ನು ಉಲ್ಟಾ ನೇತು ಹಾಕಿ ಮನಬಂದಂತೆ ಥಳಿಸಿದ ತಂದೆ; ಕಾರಣ ಹೀಗಿದೆ

Viral Assault
Published on

ಭೋಪಾಲ್​: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಇಬ್ಬರು ಮಕ್ಕಳನ್ನು ಉಲ್ಟಾ ನೇತು ಹಾಕಿ ಮನಬಂದಂತೆ ಥಳಿಸಿ ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಅಶೋಕ್​ನಗರ ಜಿಲ್ಲೆಯ ಚಂದೇರಿ ಗ್ರಾಮದಲ್ಲಿ ನಡೆದಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ 4-5 ವರ್ಷ ಆಸುಪಾಸಿನ ಇಬ್ಬರು ಮಕ್ಕಳನ್ನು ಉಲ್ಟಾ ನೇತು ಹಾಕಿರುವ ವ್ಯಕ್ತಿ ಅವರನ್ನು ಮನಬಂದಂತೆ ಥಳಿಸುತ್ತಿದ್ದು, ಬಳಿಕ ಅದರ ವಿಡಿಯೋವನ್ನು ತನ್ನಿಂದ ಪ್ತತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ಕಳುಹಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಶೋಕ್​ನಗರ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಭಗವಾನ್​ ದಾಸ್​ ಎಂಬ ವ್ಯಕ್ತಿಯು ರಾಧಾ ಎಂಬುವವರನ್ನು ಮದುವೆಯಾಗಿದ್ದ. ರಾಧಾಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಭಗವಾನ್​ ದಾಸ್​ ಎರಡನೇ ಪತಿ ಎಂದು ತಿಳಿದು ಬಂದಿದೆ. ಭಗವಾನ್​ ದಾಸ್​ನಿಂದ ರಾಧಾ ಕಳೆದ ಒಂದು ವರ್ಷದಿಂದ ದೂರ ಉಳಿದಿದ್ದು, ಮಕ್ಕಳನ್ನು ಪತಿಯ ಬಳಿ ಬಿಟ್ಟು ಹೋಗಿದ್ದಳು.

ಯಾವ ಕಾರಣಕ್ಕೆ ಮಕ್ಕಳ ಮೇಲೆ ಈ ರೀತಿ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ದೂರವಾಗಿರುವ ಹೆಂಡತಿಯನ್ನು ಹತ್ತಿರ ಮಾಡಿಕೊಳ್ಳಲು ಈ ರೀತಿ ಮಾಡಿದ್ದಾನಾ ಎಂಬುದು ತಿಳಿದು ಬಂದಿಲ್ಲ. ವಿಡಿಯೋವನ್ನು ನೋಡುತ್ತಿದ್ದಂತೆ ಪತ್ನಿ ಪತಿಯ ವಿರುದ್ಧ ದೂರು ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಹೇಳಿಕೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net