

Black Armbands: ಇಂದು (ಡಿ.27) ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅಖಾಡಕ್ಕಿಳಿದ ಭಾರತೀಯ ಆಟಗಾರರು, ತಮ್ಮ ತೋಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಬಂದಿರುವುದು ಕ್ರಿಕೆಟ್ ಪ್ರಿಯರಲ್ಲಿ ಗೊಂದಲ ಹುಟ್ಟುಹಾಕಿದೆ.
ನಿನ್ನೆ (ಡಿ.26) ತಡರಾತ್ರಿ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನದಂದು ಭಾರತೀಯ ಆಟಗಾರರು ಕಪ್ಪು ಬ್ಯಾಂಡ್ಗಳನ್ನು ತಮ್ಮ ತೋಳಿಗೆ ಧರಿಸಿ ಪಂದ್ಯವನ್ನಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ನಡೆದ ಮೊದಲ ಇನ್ನಿಂಗ್ಸ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಪಡೆ, 122.4 ಓವರ್ ಅಂತ್ಯಕ್ಕೆ 474 ರನ್ ಗಳಿಸಲು ಶಕ್ತವಾಯಿತು. ಈ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಶತಕ ಸಿಡಿಸುವುದರೊಂದಿಗೆ ತಂಡದ ಒಟ್ಟು ಮೊತ್ತವನ್ನು 400 ರನ್ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದು ದ್ವಿತೀಯ ಇನ್ನಿಂಗ್ಸ್ ಆರಂಭವಾಗಿದ್ದು, ಟೀಮ್ ಇಂಡಿಯಾ ಗೆಲುವಿನ ಪತಾಕೆ ಹಾರಿಸುವಲ್ಲಿ ದಾಪುಗಾಲು ಇಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).