

ಪುಣೆ: ಇಲ್ಲಿನ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಆತಿಥೇಯರು ಭರ್ಜರಿ ಕಮ್ಬ್ಯಾಕ್ ಮಾಡಿದ್ದು, ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಭಾರತ ಟಿ20 ಮಾದರಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ (Team India) ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ (53 ರನ್, 30 ಎಸೆತ, 4 ಬೌಂಡರಿ, 4 ಸಿಕ್ಸರ್), ಶಿವಂ ದುಬೆ (53 ರನ್, 34 ಎಸೆತ, 7 ಬೌಂಡರಿ, 2 ಸಿಕ್ಸರ್) ಉಪಯುಕ್ತ ಆಟದ ಫಲವಾಗಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ಗಳಿಸಿತು. ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡವು ಭರ್ಜರಿ ಆರಂಭ ಪಡೆಯಿತಾದರೂ ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ಮಧ್ಯಮವೇಗಿ ಹರ್ಷಿತ್ ರಾಣಾ ಕರಾರುವಾಕ್ ದಾಳಿಯ ಪರಿಣಾಮ 19.4 ಓವರ್‌ನಲ್ಲಿ 166 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಭಾರತ (Team India) ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಟಾಸ್ ಸೋತ ಬಳಿಕ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್ ಘೋಷಿಸಿದಾಗ, ಆ ತಂಡದಲ್ಲಿ ಹರ್ಷಿತ್ ರಾಣಾ (Harshit Rana) ಸ್ಥಾನ ಪಡೆದಿರಲಿಲ್ಲ. ಆದರೆ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದಾಗ 12ನೇ ಓವರ್ ಮಾಡಲು ಹರ್ಷಿತ್ ರಾಣಾ ಬಂದರು. ಆಗ ಕ್ರೀಡಾಭಿಮಾನಿಗಳು ಒಂದು ಕ್ಷಣ ಆಶ್ಚರ್ಯಗೊಂಡರು. ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದಿದ್ದರೂ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಲು ಶುರು ಮಾಡಿದರು.
ತಂಡ ಅಲ್ಪಮೊತ್ತಕ್ಕೆ ಕುಸಿದಾಗ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ನೆರವಾಗಿದ್ದ ಶಿವಂ ದುಬೆ ಟೀಮ್ ಇಂಡಿಯಾ ಇನ್ನಿಂಗ್ಸ್ನ ಕೊನೆಯ ಓವರ್‌ನಲ್ಲಿ ಜೇಮಿ ಓವರ್‌ಟನ್ ಅವರ ಬೌನ್ಸರ್ ಹೆಲ್ಮೆಟ್ಗೆ ತಾಗಿತ್ತು. ಫಿಸಿಯೋಗಳು ಧಾವಿಸಿ ಕನ್ಕಷನ್ ಟೆಸ್ಟ್ ಮಾಡಿದರು. ಬ್ಯಾಟಿಂಗ್ ಮುಂದುವರಿಸಿದ ದುಬೆ ಕೊನೆಯ ಎಸೆತದಲ್ಲಿ ರನೌಟ್ ಆದರು. ಆದರೆ ನಿಯಮಗಳ ಪ್ರಕಾರ ಕನ್ಕಷನ್ ಉಂಟಾದಾಗ, ಅವರ ಬದಲಿಗೆ ಬೇರೊಬ್ಬ ಆಟಗಾರ ತಂಡ ಸೇರಿಕೊಂಡು ಆಡಬಹುದು.
ಈ ನಿಯಮವು ಸಬ್ಸ್ಟಿಟ್ಯೂಟ್ ಆಟಗಾರನಿಂಗಿಂತ ಭಿನ್ನವಾಗಿರುತ್ತದೆ. ಅಂದರೆ ಸಬ್ಸ್ಟಿಟ್ಯೂಟ್ ಆದರೆ ಕೇವಲ ಫೀಲ್ಡಿಂಗ್ ಮಾತ್ರ ಮಾಡಬಹುದು, ಆದರೆ ಅವರು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವಂತಿರಲ್ಲ. ಆದರೆ ಕನ್ಕಷನ್ ಸಬ್ಸ್ಟಿಟ್ಯೂಟ್ ಆದರೆ ಬ್ಯಾಟಿಂಗ್-ಬೌಲಿಂಗ್ ಎರಡನ್ನೂ ಮಾಡಬಹುದಾಗಿದೆ. ಇದರ ಲಾಭ ಪಡೆದ ಮ್ಯಾನೇಜ್ಮೆಂಟ್ ವೇಗಿ ಹರ್ಷಿತ್ ರಾಣಾರನ್ನು (4-0-33-3) ಕಣಕ್ಕಿಳಿಸುವ ಮೂಲಕ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿತ್ತು. ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ತೋರುವ ಮೂಲಕ ಹರ್ಷಿತ್ ರಾಣಾ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ಕನ್ಕಷನ್ ನಿಯಮದ ಅರಿವಿಲ್ಲದೇ ಹಲವರು ಟೀಮ್ ಇಂಡಿಯಾದ ವಿರುದ್ಧ ಮೋಸದಾಟದ ಆರೋಪ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಕಾರ ಎತ್ತಿದ್ದಾರೆ. ಈ ವಿಚಾರ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಬಗ್ಗೆ ಗಹನವಾದ ಚರ್ಚೆ ನಡೆಯುತ್ತಿದೆ.