

ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ಪಾಕಿಸ್ತಾನ ಹಾಗ ದುಬೈ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಈಗಾಗಲೇ ತಯಾರಿ ಭರದಿಂದ ಸಾಗಿದ್ದು, ಟೂರ್ನಿ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಇಡೀ ವಿಶ್ವವೇ ಕಾದು ವೀಕ್ಷಿಸುವ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 23ರಂದು ನಡೆಯಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.
ಇನ್ನೂ ಚಾಂಪಿಯನ್ಸ್ ಟ್ರೋಫಿ ಶುರುವಾಗುವುದಕ್ಕೂ ಮುಂಚಿನಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಹಾಗೂ ಹಾಲಿ ಆಟಗಾರರು ಹೇಳಿಕೆಗಳನ್ನು ನೀಡುತ್ತ ಬಂದಿದ್ದು, ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ಭಾರತ-ಪಾಕ್ ನಡುವಿನ ಪಂದ್ಯದ ಕುರಿತು ಹೇಳಿಕೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮೊಯಿನ್ ಖಾನ್, ಭಾರತದ ವಿರುದ್ಧ ಆಡುವಾಗ ಎದುರಾಳಿಗಳ ಜೊತೆ ಮಾತನಾಡುವ ಅವಶ್ಯಕತೆಯಿಲ್ಲ ಎಂದು ನಮ್ಮ ಹಿರಿಯ ಆಟಗಾರರು ಯಾವಾಗಲೂ ನಮಗೆ ಹೇಳುತ್ತಿದ್ದರು. ನಮಗೆ ಹೇಳುತ್ತಿದ್ದರು. ನೀವು ಸ್ನೇಹದಿಂದ ವರ್ತಿಸಿದಾಗ, ಅವರು ಅದನ್ನು ದೌರ್ಬಲ್ಯದ ಸಂಕೇತವಾಗಿ ನೋಡುತ್ತಾರೆ. ಇತ್ತೀಚಿನ ದಿನಗಳಲ್ಲಿ, ಭಾರತದ ವಿರುದ್ಧ ಆಡುವಾಗ ನಮ್ಮ ಆಟಗಾರರ ವರ್ತನೆಯು ನನಗೆ ಅಗ್ರಾಹ್ಯವಾಗಿದೆ. ವೃತ್ತಿಪರರಾಗಿ ಮೈದಾನದ ಹೊರಗೆ ಕೂಡ ನೀವು ಕೆಲವು ಗಡಿಗಳನ್ನು ಹೊಂದಿರಬೇಕು.
ನಮ್ಮ ಆಟಗಾರರಿಗೆ ಈ ವಿಚಾರ ಅರ್ಥವಾಗುವುದಿಲ್ಲ ಎಂದು ಭಾವಿಸುತ್ತೇನೆ. ಸ್ನೇಹಪರವಾಗಿರುವುದು ಮೈದಾನದಲ್ಲಿ ದೌರ್ಬಲ್ಯದ ಸಂಕೇತವಾಗಿ ಕಂಡುಬರುತ್ತದೆ ಮತ್ತು ನಿಮ್ಮ ಪ್ರದರ್ಶನಗಳಲ್ಲಿ ನೀವು ಸ್ವಯಂಚಾಲಿತವಾಗಿ ಒತ್ತಡಕ್ಕೆ ಒಳಗಾಗುತ್ತೀರಿ. ಹೀಗಾಗಿ ಭಾರತದ ಎದುರು ನೀವು ಸ್ನೇಹಪರರಾಗಿರಬೇಡಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್ ಮೊಯಿನ್ ಖಾನ್ ಆಟಗಾರರಿಗೆ ಎಚ್ಚರಿಸಿದ್ದಾರೆ.