

ಬೆಂಗಳೂರು: ಚೇತನ್ ಶರ್ಮ ಸಾರಥ್ಯದ ಆಯ್ಕೆ ಸಮಿತಿ ಗುರುವಾರವಷ್ಟೇ (ಜೂನ್ 10) ಶ್ರೀಲಂಕಾದ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಟೆಸ್ಟ್ ಸರಣಿಯಲ್ಲಿ ಆಡಲು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಇಂಗ್ಲೆಂಡ್ಗೆ ತೆರಳಿರುವ ಹಿನ್ನೆಲೆಯಲ್ಲಿ ಲಂಕಾ ಪ್ರವಾಸಕ್ಕೆ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕಲಾಗಿದೆ. ಅನುಭವಿ ಶಿಖರ್ ಧವನ್ ಸಾರಥ್ಯದ ಭಾರತ ತಂಡದಲ್ಲಿ ಕನ್ನಡಿಗರಾದ ಮನೀಷ್ ಪಾಂಡೆ, ದೇವದತ್ ಪಡಿಕಲ್ ಹಾಗೂ ಕೆ.ಗೌತಮ್ಗೆ ಅವಕಾಶ ನೀಡಲಾಗಿದೆ. ನೆಟ್ ಬೌಲರ್ಗಳು ಸೇರಿದಂತೆ 20 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ, ತಂಡದ ನಾಯಕತ್ವದ ವಿರುದ್ಧ ಕನ್ನಡಿಗ, ಭಾರತ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧವನ್ ಬದಲಿಗೆ ಕರ್ನಾಟಕದ ಮನೀಪ್ ಪಾಂಡೆಗೆ ನಾಯಕತ್ವ ನೀಡಬೇಕಿತ್ತು ಎಂದು ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ಮನೀಷ್ ಪಾಂಡೆ ಅವರನ್ನು ನಾಯಕನಾಗಿ ಮಾಡಬೇಕಿತ್ತು. ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಅಶ್ಚರ್ಯ ತರಿಸಿದೆ ಎಂದು ಬೆಂಗಳೂರಿನ ದೊಡ್ಡ ಗಣೇಶ್ ತಿಳಿಸಿದ್ದಾರೆ. ಮನೀಷ್ ಪಾಂಡೆ ಆಟಗಾರ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಆಟಗಾರ. ಒಂದು ವೇಳೆ ಧವನ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಮಧ್ಯದಲ್ಲಿಯೇ ಕರೆದರೆ ತಂಡವನ್ನು ಮುನ್ನಡೆಸುವವರು ಯಾರು ಎಂದು ಆಯ್ಕೆ ಸಮಿತಿ ನಿರ್ಧಾರವನ್ನು 47 ವರ್ಷದ ಗಣೇಶ್ ಪ್ರಶ್ನಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಜುಲೈ 13, 16 ಹಾಗೂ 18 ರಂದು ಏಕದಿನ, ಜುಲೈ 21, 23 ಹಾಗೂ 25 ರಂದು ಟಿ20 ಪಂದ್ಯಗಳು ನಡೆಯಲಿವೆ. ಭಾರತ ತಂಡದ ಆಟಗಾರರ ಲಂಕಾ ಪ್ರವಾಸಕ್ಕೂ ಮುನ್ನ ಜೂನ್ 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ.