

ಪ್ಯಾರಿಸ್: ವಿಶ್ವ ನಂ.1 ನೊವಾಕ್ ಜೋಕೊವಿಕ್ ಹಾಗೂ ರಾಫೆಲ್ ನಡಾಲ್ ನಡುವಿನ ಕದನ ಟೆನಿಸ್ ಪ್ರಿಯರಿಗೆ ರಸದೌತಣ ನೀಡುವುದರಲ್ಲಿ ಅನುಮಾನವಿಲ್ಲ. ಈ ಇಬ್ಬರ ನಡುವಿನ ಕಾದಾಟ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುತ್ತದೆ. ಶುಕ್ರವಾರ ತಡರಾತ್ರಿ ಫ್ರೆಂಚ್ ಓಪನ್ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಕದನ ಕೂಡ ಅಷ್ಟೇ ರೋಚಕತೆಯಿಂದ ಕೂಡಿತ್ತು. ಗ್ರಾಂಡ್ ಸ್ಲಾಂ ಅಂಗಳದಲ್ಲಿ ಇವರಿಬ್ಬರೂ ಸಾಂಪ್ರದಾಯಿಕ ಎದುರಾಳಿಗಳು ಎಂದೇ ಬಿಂಬಿತವಾಗಿದ್ದಾರೆ. ಇವರಿಬ್ಬರ ನಡುವಿನ ಕಾದಾಟ ವೀಕ್ಷಿಸುವ ಸಲುವಾಗಿ ಫ್ರೆಂಚ್ ಅಧ್ಯಕ್ಷ ಮಾರ್ಕನ್, ಪ್ಯಾರಿಸ್ ನಗರದಲ್ಲಿ ರಾತ್ರಿ 11ರ ಬಳಿಕವಿದ್ದ ಕರ್ಫ್ಯೂವನ್ನೇ ಸಡಿಲಗೊಳಿಸುವಂತೆ ಆದೇಶ ಹೊರಡಿಸಿದ್ದರು.
ಫ್ರೆಂಚ್ ಓಪನ್ನ ಸಿಂಗಲ್ಸ್ ವಿಭಾಗದ 2ನೇ ಸೆಮಿಫೈನಲ್ ಕದನದಲ್ಲಿ ನೊವಾಕ್ ಜೋಕೊವಿಕ್ 3-6, 6-3, 7-6(7/4), 6-2 ಸೆಟ್ಗಳಿಂದ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಸೋಲಿಸಿದರು. ಈ ದಿಗ್ಗಜರ ನಡುವಿನ ಕಾದಾಟ ವೀಕ್ಷಿಸಲು ಅದೆಷ್ಟೋ ಅಭಿಮಾನಿಗಳು ಕಾದುಕುಳಿತಿದ್ದರು. ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ 3ನೇ ಸೆಟ್ ಸುಮಾರು 92 ನಿಮಿಷಗಳ ಕಾಲ ನಡೆಯಿತು. ಈ ಸುದೀರ್ಘ ಅವಧಿಗೆ ಹೋರಾಡಿದ ಉಭಯ ಆಟಗಾರರ ಫಿಟ್ನೆಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಇಂಥ ರೋಚಕತೆ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ನೆರವಾಗುವಂತೆ ಫ್ರೆಂಚ್ ಅಧ್ಯಕ್ಷರು ರಾತ್ರಿ ವಿಧಿಸಿದ್ದ ನಿರ್ಬಂಧವನ್ನು ಸಡಿಲಗೊಳಿಸಿದರು. ಅಧ್ಯಕ್ಷರ ಈ ತೀರ್ಮಾನದಿಂದಾಗಿ ನಿಟ್ಟುರಿಸು ಬಿಟ್ಟ ಅಭಿಮಾನಿಗಳು ರೋಚತೆಯಿಂದ ಕೂಡಿದ ಪಂದ್ಯ ವೀಕ್ಷಿಸಿದರು.
ಫ್ರೆಂಚ್ ಓಪನ್ನಲ್ಲಿ ನಡಾಲ್ ಅವರ ಸಾಧನೆಯನ್ನು ಯಾರು ಮುರಿಯಲು ಸಾಧ್ಯವಿಲ್ಲ. ಇಂಥ ಆಟಗಾರನ ಎದುರು ಜಯಿಸಿಬೇಕೆಂದರೆ ಮೌಂಟ್ ಎವರೆಸ್ಟ್ ಏರಿದಂತೆ ಎಂದು ಜೋಕೋ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದರು. ಮತ್ತೊಂದೆಡೆ, ಸೋಲಿಗೆ ಬೇಸರ ವ್ಯಕ್ತಪಡಿಸಿದ 35 ವರ್ಷದ ನಡಾಲ್, ಸೋಲು ಬೇಸರ ತರಿಸಿದೆ, ನಾಳೆಯಿಂದ ಎಲ್ಲವೂ ಸರಿಹೋಗುತ್ತದೆ. ಕುಟುಂಬ, ಸ್ನೇಹಿತರೊಂದಿಗೆ ಕುಳಿತು ಮುಂದಿನ ಯೋಜನೆ ಬಗ್ಗೆ ತೀರ್ಮಾನಿಸುವೆ ಎಂದಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ಜಯಿಸಿರುವ ಸಿಸಿಪಾಸ್ ಹಾಗೂ ಜೋಕೋ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಎದುರಾಗಲಿದ್ದಾರೆ.