

ಲಾಹೋರ್: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಈಗಿನಿಂದಲೇ ದೊಡ್ಡ ಮಟ್ಟದ ಲೆಕ್ಕಾಚಾರಗಳು ಶುರುವಾಗಿದ್ದು, ಅತಿಥ್ಯವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ವಹಿಸಿಕೊಂಡಿರುವುದು ಮತ್ತಷ್ಟು ವಿಶೇಷ. ತಂಡದಲ್ಲಿ ಯಾವ ಬೌಲರ್, ಬ್ಯಾಟರ್ ಹಾಗೂ ಆಲ್ರೌಂಡರ್ ಇದ್ದರೆ ನಮಗೆ ಗೆಲುವು ಬಹಳ ಸುಲಭವಾಗುತ್ತದೆ ಎಂಬುದನ್ನು ಯೋಚಿಸಬೇಕಿದ್ದ ಪಾಕ್, ಇದುವರೆಗೂ ತಮ್ಮ ನೆಲಕ್ಕೆ ಪ್ರಯಾಣಿಸದ ಟೀಮ್ ಇಂಡಿಯಾವನ್ನು ಹೇಗಾದರೂ ಮಾಡಿ ಕರೆಸಿಕೊಳ್ಳುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಭಾರತದ ಸ್ಟಾರ್ ಆಟಗಾರರನ್ನು ಬ್ಯಾಕ್ ಟು ಬ್ಯಾಕ್ ಟೀಕಿಸುತ್ತಿರುವ ಪಾಕ್ ಮಾಜಿ ಆಟಗಾರರು, ಹೀಗಾದರೂ ಬರುತ್ತಾರೋ ಏನೋ ಎಂದು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಿದೆ.
ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಿಕೊಡಿ ಎಂದು ಪಿಸಿಬಿ ಈ ಹಿಂದೆಯೇ ಬಿಸಿಸಿಐಗೆ ಒತ್ತಾಯಿಸಿತ್ತು. ಆದ್ರೆ, ಇದಕ್ಕೆ ಕಿಂಚಿತ್ತು ಆಸ್ಪದ ನೀಡದ ಭಾರತೀಯ ಕ್ರಿಕೆಟ್ ಮಂಡಳಿ, ಯಾವುದೇ ಕಾರಣಕ್ಕೂ ಟೀಮ್ ಇಂಡಿಯಾ ಪಾಕ್ಗೆ ಬರೋದಿಲ್ಲ ಎಂದು ಖಡಕ್ ಆಗಿ ತಿಳಿಸಿತ್ತು. ಈ ವಿಚಾರ ದೊಡ್ಡ ವಿವಾದಕ್ಕೆ ತಿರುಗಿದ್ದು, ಮೆನ್ ಇನ್ ಬ್ಲ್ಯೂ ಪಡೆಯನ್ನು ಲಾಹೋರ್ಗೆ ಕರೆತರುವ ಪಾಕ್ನ ಎಲ್ಲಾ ಪ್ರಯತ್ನವೂ ಸದ್ಯ ವಿಫಲವಾಗಿದೆ. ಭಾರತದ ಸ್ಟಾರ್ ಆಟಗಾರರ ವಿರುದ್ಧ ಕೆಂಡಕಾರುತ್ತಿರುವ ಪಾಕ್ ಕ್ರಿಕೆಟ್ ಮಂಡಳಿ, ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ್ ಷಾ ಅವರಿಂದ ಈಗಲಾದರೂ ನಮ್ಮ ಉದ್ದೇಶ ಈಡೇರಬಹುದು ಎಂಬ ನಿರೀಕ್ಷೆಯಲ್ಲಿದೆ. ಆದ್ರೆ, ಬಹುಶಃ ಇದು ಕಷ್ಟಸಾಧ್ಯ ಎಂದೇ ಹೇಳಬಹುದು. ಇನ್ನು ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಮಾತನಾಡಿರುವ ಪಾಕ್ನ ಮಾಜಿ ಬೌಲರ್ ಡ್ಯಾನಿಶ್ ಕನೇರಿಯಾ, ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
"ಪ್ರಸ್ತುತ ಪಾಕ್ನ ಪರಿಸ್ಥಿತಿ ಸರಿಯಿಲ್ಲ. ಟೀಮ್ ಇಂಡಿಯಾ ನಮ್ಮ ನೆಲಕ್ಕೆ ಬರುವುದು ಸೂಕ್ತವಲ್ಲ. ನನ್ನನ್ನು ಕೇಳಿದರೆ ಖಂಡಿತ ಇಲ್ಲಿಗೆ ಬರೋದು ಬೇಡವೆಂದೆ ಹೇಳ್ತೀನಿ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಯೋಚಿಸಿ, ನಿರ್ಧಾರ ಕೈಗೊಳ್ಳುವುದು ಬಹಳ ಒಳಿತು. ಏನೇ ಆದರೂ ಅಂತಿಮವಾಗಿ ಐಸಿಸಿ ತನ್ನ ನಿಲುವು ಪ್ರಕಟಿಸಲಿದೆ. ಆದ್ರೆ, ನನಗೆ ಈ ಟೂರ್ನಮೆಂಟ್ ಹೈಬ್ರಿಡ್ ಮಾದರಿಯಲ್ಲಿ ನಡೆದರೆ ಸರಿ ಅನಿಸುತ್ತದೆ. 2025ರ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲೇ ನಡೆಯುತ್ತದೆ ಎಂದು ನಾನು ಭಾವಿಸಿದ್ದೀನಿ" ಎಂದರು.
"ಆಟಗಾರರ ಸುರಕ್ಷತೆಯ ಬಗ್ಗೆ ಬಿಸಿಸಿಐ ತೆಗೆದುಕೊಂಡಿರುವ ನಿಲುವು ಉತ್ತವಾಗಿದೆ. ಇಲ್ಲಿ ಸುರಕ್ಷತೆ ಮೊದಲ ಆದ್ಯತೆ ಆನಂತರ ಗೌರವ. ಬಿಸಿಸಿಐ ನಿರ್ಧಾರವನ್ನು ಇನ್ನಿತರೆ ದೇಶಗಳು ಕೂಡ ಒಪ್ಪಿಕೊಳ್ಳುತ್ತದೆ. ಈ ವಿಷಯದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಒಂದೊಳ್ಳೆ ಕೆಲಸ ಮಾಡುತ್ತಿದೆ ಎಂದರೆ ಖಂಡಿತ ತಪ್ಪಾಗಲಾರದು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).