ಭಾರತದ ಬೌಲರ್​ಗಳ ಫಾರ್ಮ್​ ಸಮಸ್ಯೆಗೆ ಈ ಸರಣಿ ನಿರ್ಣಾಯಕ

Team India
Published on

ತಿರುವನಂತಪುರಂ: ತವರಿನಲ್ಲಿ ನಡೆಯುತ್ತಿರುವ ಭಾರತ - ಸೌತ್​ ಆಫ್ರಿಕಾ ನಡುವಣ ಪಂದ್ಯ ಮುಂಬರುವ ಟಿ-20 ವಿಶ್ವಕಪ್​ ದೃಷ್ಠಿಯಿಂದ ಭಾರತಕ್ಕೆ ಈ ಸರಣಿ ನಿರ್ಣಾಯಕ. ಭಾರತ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದುಕೊಂಡರು, ಎದುರಾಳಿ ತಂಡಕ್ಕೆ ಪರಿಣಾಮಕಾರಿಯಾಗಿ ಪ್ರತಿಸ್ಪರ್ಧೆ ಒಡ್ಡುವಲ್ಲಿ ಸೋತಿತ್ತು. ಹೀಗಾಗಿ ತಂಡದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಈ ಸರಣಿ ನಿರ್ಣಾಯಕವಾಗಿದೆ.

ಭಾರತ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆ.ಎಲ್. ರಾಹುಲ್ ಇನ್ನಿಂಗ್ಸ್​ ಆರಂಭಿಸುತ್ತಿದ್ದಾರೆ. ತಂಡಕ್ಕೆ ಉತ್ತಮ ಆರಂಭಿಕ ಮೊತ್ತ ಕಲೆ ಹಾಕಿದರೂ, ದೊಡ್ಡ ಮೊತ್ತದ ರನ್​ ಆಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ. ಶತಕ ಸಿಡಿಸುತ್ತಿಲ್ಲ ಎಂದು ಟೀಕೆಗೆ ಗುರಿಯಾಗುತ್ತಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್​ನಿಂದ ಮರಳಿ ಫಾರ್ಮ್​ಗೆ ಬಂದಿದ್ದಾರೆ. ಇನ್ನು ನಾಲ್ಕನೇ ವಿಕೆಟ್​ಗೆ ಸೂರ್ಯಕುಮಾರ್ ಯಾದವ್ ಫಿಕ್ಸ್. ಸಿಕ್ಕ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಸೂರ್ಯಕುಮಾರ್ ತಂಡದ ಟ್ರಂಪ್ ಕಾರ್ಡ್. ಇನ್ನು ದಿನೇಶ್​ ಕಾರ್ತಿಕ್ ಮ್ಯಾಚ್​ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ ಟಿ-20 ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಒಂದು ವೇಳೆ ರಿಷಬ್ ಪಂತ್ ಅವಕಾಶ ಪಡೆದರೂ ಮಿಡಲ್ ಆರ್ಡರ್​ನಲ್ಲಿ ಮಿಂಚಬಲ್ಲರು. ಹೀಗಾಗಿ ಭಾರತ ತಂಡದ ಬ್ಯಾಟಿಂಗ್ ಲೈನ್​​ಅಪ್ ಬಲಿಷ್ಠವಾಗಿದೆ.

ಭಾರತ ತಂಡಕ್ಕೆ ಬೌಲಿಂಗ್​ನದ್ದೇ ಚಿಂತೆ!

ಸದ್ಯಕ್ಕೆ ಭಾರತ ತಂಡಕ್ಕೆ ಬೌಲಿಂಗ್​ನದ್ದೇ ಚಿಂತೆಯಾಗಿದೆ. ಈ ಸರಣಿಯಲ್ಲಿ ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಆಡುತ್ತಿಲ್ಲವಾದರೂ ಹಿಂದಿನ ಸರಣಿಯಾಗಿ ಡೆತ್ ಓವರ್​ ಬೌಲಿಂಗ್​ ಮಾಡಿ ದುಬಾರಿಯಾಗಿದ್ದರು. ಜೊತೆಗೆ ಡೆತ್​ ಓವರ್ ಸ್ಪೆಷಲಿಸ್ಟ್​ ಹರ್ಷಲ್ ಪಟೇಲ್​ ದುಬಾರಿಯಾಗಿದ್ದರು. ಇದೀಗ ಬುಮ್ರಾ ಕಂಬ್ಯಾಕ್​​ನ್ನೇ ಭಾರತ ಹೆಚ್ಚು ಅವಲಂಬಿಸಿದೆ. ಶಮಿ ಅಲಭ್ಯತೆಯಿಂದಾಗಿ ಉಮೇಶ್ ಯಾದವ್ ತಂಡ ಕೂಡಿಕೊಂಡಿದ್ದಾರೆ. ಇದೀಗ ಆರ್ಶದೀಪ್ ಡೆತ್​ ಓವರ್​​ನಲ್ಲಿ ಎದುರಾಳಿ ತಂಡದ ರನ್​ಗೆ ಕಡಿವಾಣ ಹಾಕಬೇಕಿದೆ. ಹೀಗಾಗಿ ಮುಂಬರುವ ವಿಶ್ವಕಪ್​ ಸರಣಿಯ ದೃಷ್ಟಿಯಿಂದ ಭಾರತದ ಬೌಲರ್​ಗಳು ಫಾರ್ಮ್​ಗೆ ಮರಳಲು ಈ ಸರಣಿ ನಿರ್ಣಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net