500 ರೂ. ಕೊಟ್ರೆ ಒಂದು ದಿನ ಜೈಲಿನಲ್ಲಿ ಇರಲು ಅವಕಾಶ!

Jail
Published on

ಉತ್ತರಾಖಂಡ್: ಬಹುತೇಖ ಜನರಿಗೆ ಜೋತಿಷ್ಯರ ಬಳಿ ಭವಿಷ್ಯ ಕೇಳುವ ಅಭ್ಯಾಸವಿರುತ್ತದೆ. ಸಮಸ್ಯೆಗೆ ಪರಿಹಾರವೇನು? ಗ್ರಹಗತಿಗಳು ಹೇಗಿವೆ? ಮುಂದಿನ ಭವಿಷ್ಯವೇನು? ಹೀಗೆ, ಸಂದರ್ಭ ಬಂದಾಗೆಲ್ಲಾ ಜ್ಯೋತಿಷ್ಯರನ್ನು ಭೇಟಿಯಾಗುತ್ತಾರೆ. ಹೀಗೆ ಭೇಟಿಯಾದಾಗ ನಿಮ್ಮ ಗ್ರಹಗತಿಗಳನ್ನು ನೋಡಿ, ಬಂಧನ ಯೋಗವಿದೆ ಎಂದರೆ ಚಿಂತಿಸಬೇಡಿ. ಇದರಿಂದ ತಪ್ಪಿಸಿಕೊಳ್ಳಲು ಇದೀಗ ಉತ್ತರಾಖಂಡ್​​ನ ಜೈಲು ಆಡಳಿತ ಹೊಸ ಆಫರ್ ಒಂದನ್ನು ನೀಡಿದೆ. ಅದು 500 ರೂಪಾಯಿಗೆ ಒಂದು ದಿನ ಜೈಲಿನಲ್ಲಿರಲು ಅವಕಾಶ ಮಾಡಿಕೊಡುತ್ತಿದೆ.

ಹಲ್ದ್ವಾನಿ ಕಾರಾಗೃಹವನ್ನು 1903ರಲ್ಲಿ ನಿರ್ಮಿಸಲಾಗಿದೆ. ಹಿರಿಯ ಅಧಿಕಾರಿಗಳ ಶಿಫಾರಸ್ಸಿನೊಂದಿಗೆ ಜೈಲಿನಲ್ಲಿ ಉಳಿದುಕೊಳ್ಳಲು ಬರಬಹುದು. ಪ್ರವಾಸಿ ಖೈದಿಗಳೆಂದು ಉಪಚಾರ ಮಾಡಲಾಗುತ್ತದೆ. ಖೈದಿಗಳು ಧರಿಸುವಂತಹ ಬಟ್ಟೆ ಹಾಗೂ ಕಾರಾಗೃಹದ ಅಡುಗೆ ಕೋಣೆಯಲ್ಲೇ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ ಎಂದು ಜೈಲಿನ ಉಪ ಜೈಲು ಅಧೀಕ್ಷಕ ಸತೀಶ್ ಸುಖಿಜಾ ತಿಳಸಿದ್ದಾರೆ.

ಪ್ರಸ್ತುತ ಈ ಹಳೆಯ ಜೈಲಿನಲ್ಲಿ ಖೈದಿಗಳನ್ನು ಇರಿಸುವುದಿಲ್ಲ. ಈ ಜೈಲನ್ನು ಪ್ರವಾಸಿಗರಿಗೆ ತಂಗಲು ಬೇಕಾದ ಮಾದರಿಯಲ್ಲಿ ಲಾಡ್ಜ್​​​ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಇಲ್ಲಿ ಉಳಿದುಕೊಳ್ಳಲು ಬರುವವರಿಗೆ ಕಾರಾಗೃಹದ ಅನುಭವ ಆಗುವಂತಹ ವ್ಯವಸ್ಥೆ ರೂಪಿಸಲಾಗುವುದು. ಹೀಗಾಗಿ ಜ್ಯೋತಿಷ್ಯರು ಬಂಧನ ಯೋಗವಿದೆ ಎಂದರೆ ಚಿಂತಿಸಬೇಡಿ ಎಂದು ರಾಜ್ಯದ ಜೈಲು ಆಡಳಿತ ತಿಳಿಸಿದೆ.

ಜ್ಯೋತಿಷ್ಯರು ಜಾತಕದ ಗ್ರಹಗತಿಗಳ ಸ್ಥಾನಗಳನ್ನು ನೋಡಿ ಜೈಲು ಶಿಕ್ಷಗೆ ಒಳಪಡುತ್ತೀರಿ ಎಂದು ಭವಿಷ್ಯ ನುಡಿದರೆ ನೇರವಾಗಿ ಇಲ್ಲಿಗೆ ಬನ್ನಿ. ಅತಿಥಿ ಖೈದಿಗಳೆಂದು ಪರಿಗಣಿಸುತ್ತೇವೆ. ಒಂದು ರಾತ್ರಿಗೆ 500 ರೂ. ಪಾವತಿಸಿ ಉಳಿದುಕೊಳ್ಳಬಹುದು ಎಂದು ಹಲ್ದ್ವಾನಿ ಜೈಲಿನ ಜೈಲು ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net