

ಬೆಂಗಳೂರು: ನಟ ಗೋಲ್ಡನ್ ಸ್ಟಾರ್ ಗಣೇಶ್ 'ಬಾನ ದಾರಿಯಲ್ಲಿ' ಸಿನಿಮಾ ಶೂಟಿಂಗ್ನಲ್ಲಿ ಬಿಝಿಯಾಗಿದ್ದಾರೆ. ಶೂಟಿಂಗ್ಗಾಗಿ ಕೀನ್ಯಾಗೆ ತೆರಳಿರುವ ಗಣೇಶ್ ಬಿಡುವಿನ ವೇಳೆ ಶಿಲಾಯುಗ ಕಾಲದ ಗುಹೆಯೊಂದಕ್ಕೆ ತೆರಳಿದ್ದಾರೆ.
ಸದ್ಯ ಕೀನ್ಯಾದಲ್ಲಿರುವ ಗಣೇಶ್, ಬೀಡುವಾದಾಗೆಲ್ಲ ಅಲ್ಲಿನ ಜನರೊಂದಿಗೆ ಬೆರೆಯುವುದು, ಸುತ್ತಾಡುವುದು ಮಾಡುತ್ತಿದ್ದಾರೆ. ಕೀನ್ಯಾ ದೇಶದಲ್ಲಿ ಹಲವು ಗುಹೆಗಳಿವೆ. ಶಿಲಾಯುಗ ಕಾಲದ ಪಲೆಯುಳಿಕೆಗಳು ಇಂದಿಗೂ ಕಾಣಲು ಸಿಗುತ್ತವೆ. ಇದೀಗ ಗಣೇಶ್ ಶಿಲಾಯುಗ ಕಾಲದ ಗುಹೆಯೊಂದಕ್ಕೆ ತೆರಳಿದ್ದಾರೆ. ಇವರಿಗೆ ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ನಟ ರಂಗಾಯಣ ರಘು ಸಾಥ್ ನೀಡಿದ್ದಾರೆ.
ಶಿಲಾಯುಗ ಕಾಲದ ಗುಹೆ ವೀಕ್ಷಿಸಿರುವ ಗಣೇಶ್ ಖುಷಿಯಾಗಿದ್ದಾರೆ. ನಾವು ಇಂತಹ ಗುಹೆಗಳ ಬಗ್ಗೆ ಪಠ್ಯದಲ್ಲಿ ಕೇಳಿದ್ದೇವೆಯಷ್ಟೇ ಹೊರತು ವೀಕ್ಷಿಸಿರಲಿಲ್ಲ. ಇದೀಗ ವೀಕ್ಷಿಸುವ ಅವಕಾಶ ಲಭಿಸಿದೆ. ಇದೊಂದು ಅದ್ಭುತ ಅನುಭವ. ನಿಜಕ್ಕೂ ಈ ಗುಹೆಗಳು ಸುಂದರವಾಗಿವೆ ಎಂದಿದ್ದಾರೆ.
ಕೀನ್ಯಾದ ಮಾರುಕಟ್ಟೆಯೊಂದರಲ್ಲಿ ಸುತ್ತಾಡುತ್ತಿರುವ ಹಾಗೂ ರಸ್ತೆ ಬದಿ ಅಲ್ಲಿನ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿ ಸುದ್ದಿಯಾಗಿದ್ದರು. ಇದೀಗ ಪುರಾತನ ಕಾಲದ ಗುಹೆಯನ್ನು ವೀಕ್ಷಿಸುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ನಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಬಾನ ದಾರಿಯಲ್ಲಿ. ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದರೆ, ಗಣೇಶ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಾನ ದಾರಿಯಲ್ಲಿ ಸಿನಿಮಾ ತನ್ನ ಫಸ್ಟ್ ಲುಕ್ನಿಂದಾನೇ ಗಮನ ಸೆಳೆದಿತ್ತು. ಫಸ್ಟ್ ಲುಕ್ ಪೋಸ್ಟರ್ನಲ್ಲಿ ಬುಡಕಟ್ಟು ಜನಾಂಗದ ಜನರನ್ನು ತೋರಿಸಲಾಗಿತ್ತು. ಇದೀಗ ಚಿತ್ರತಂಡ ಆಫ್ರಿಕಾದ ಹಳ್ಳಿಗಳಲ್ಲಿ ಶೂಟಿಂಗ್ನಲ್ಲಿ ಬಿಝಿಯಾಗಿದೆ.
ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಾನ ದಾರಿಯಲ್ಲಿ ಚಿತ್ರದಲ್ಲಿ ಗಣೇಶ್ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ರೀಶ್ಮಾ ನಾಣಯ್ಯ ಹಾಗೂ ರಂಗಾಯಣ ರಘು ಮುಂತಾದವರಿದ್ದಾರೆ.