

ಬೆಂಗಳೂರು: ಚಾಲಾಕಿ ಕಳ್ಳಿಯರು ನಮ್ಮ ಸುತ್ತಮುತ್ತಲೇ ಇದ್ದಾರೆ. ಸ್ವಲ್ಪ ಯಾಮಾರಿದ್ರೂ, ಇರುವ ಸಂಪತ್ತನ್ನೆಲ್ಲಾ ದೋಚಿ ಬಿಡುತ್ತಾರೆ. ಪ್ರಕರಣ ನಡೆದಾಗಲೇ ಗೊತ್ತಾಗುವುದು, ಹೀಗೂ ಕಳ್ಳತನ ಮಾಡಬಹುದಾ ಎಂದು. ಹೌದು, ಇಂತದ್ದೇ ಪ್ರಕರಣವೊಂದು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಚಾಲಾಕಿ ಕಳ್ಳಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಳ್ಳತನ ಮಾಡುವುದರಲ್ಲಿ ಎಕ್ಸ್ಪರ್ಟ್. ಮೊದಲು ಪರಿಚಯ ಮಾಡಿಕೊಳ್ಳುತ್ತಾಳೆ. ಪರಿಚಯವನ್ನು ಗೆಳತನವಾಗಿ ಬದಲಾಯಿಸಿಕೊಳ್ಳುತ್ತಾಳೆ. ನಂತರ ಗೆಳೆತನದ ಸೋಗಿನಲ್ಲಿ ಮನೆಗೆ ಬಂದು ಹೋಗುವ ಅಭ್ಯಾಸ ಮಾಡಿಕೊಳ್ಳುತ್ತಾಳೆ. ಈಕೆಯ ವರ್ತನೆ ಗಮನಿಸಿದಾಗ ಯಾರಿಗೂ ಅನುಮಾನ ಬರುವುದಿಲ್ಲ. ಸಜ್ಜನ ಮಹಿಳೆಯೆಂದೇ ನಂಬಿ ಬಿಡುತ್ತಾರೆ. ಆದರೆ ಸಮಸ್ಯೆ ಆರಂಭವಾಗುವುದೇ ಇಲ್ಲಿಂದ.
ಮನೆಗೆ ಬರಲು ಆರಂಭಿಸಿದಂತೆ, ಮನೆಯವರ ಇಷ್ಟವೇನು? ಆಸಕ್ತಿಗಳೇನು ಎಂಬುವುದನ್ನು ನಾಜೂಕಾಗಿ ತಿಳಿದುಕೊಳ್ಳುತ್ತಾಳೆ. ತನ್ನ ಸರಳ ವರ್ತನೆಯಿಂದ ಯಾರಿಗೂ ಅನುಮಾನ ಬಾರದಂತೆ ವರ್ತಿಸುತ್ತಾ, ಗೆಳತಿಯ ಸೋಗಿನಲ್ಲಿ ಮನೆಯವರ ವಿಶ್ವಾಸ ಸಂಪಾದಿಸುತ್ತಾಳೆ. ನಂತರ ನಿಧಾನವಾಗಿ ಕಳ್ಳತನಕ್ಕೆ ಪ್ಲಾನ್ ರೂಪಿಸಿಕೊಳ್ಳುತ್ತಾಳೆ.
ಗೆಳತಿನ ಮುಖವಾಡ ಧರಿಸಿ ಮನೆಗೆ ಬರುತ್ತಿದ್ದಂತೆ 'ಕೀ'ಯನ್ನು ನಕಲಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಾಳೆ. ನಕಲಿ ಕೀ ಕೈ ಸೇರುತ್ತಿದ್ದಂತೆ ಪಾರ್ಟಿ ಇಷ್ಟ ಆದ್ರೆ, ಪಾರ್ಟಿ ಪಾಸ್. ಸಿನಿಮಾ ಇಷ್ಟ ಆದ್ರೆ ಸಿನಿಮಾದ ಟಿಕೆಟ್ ಕೊಟ್ಟು ಮನೆಯಿಂದ ಹೊರ ಹೋಗುವಂತೆ ಮಾಡುತ್ತಾಳೆ. ಒಂದು ವೇಳೆ ಉಚಿತವಾಗಿ ಪಾರ್ಟಿ, ಸಿನಿಮಾ ಪಾಸ್ ಸಿಕ್ಕಿತೆಂದು ಎಂಜಾಯ್ ಮಾಡಲು ಹೋದರೆ, ಮರಳಿ ಮನೆ ಸೇರಿದಾಗ ಸಂಪತ್ತೆಲ್ಲಾ ದರೋಡೆಯಾಗಿರುತ್ತದೆ.
ಇದೀಗ ಗೆಳತಿಯ ಸೋಗಿನಲ್ಲಿ ನಕಲಿ ಕೀ ಬಳಸಿ ದರೋಡೆ ಮಾಡುತ್ತಿದ್ದ ಅನಿತಾ ಎಂಬ ಚಾಲಾಕಿ ಮಹಿಳೆಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.