

ಚಿಕ್ಕೋಡಿ: ಭಾರತೀಯ ಜನತಾ ಪಕ್ಷ ಕುಡಚಿ ಮಂಡಲ ವತಿಯಿಂದ ಹಾರೂಗೇರಿ ಪಟ್ಟಣದಲ್ಲಿ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮದ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಯಿಂದ ಶಾಸಕ ಪಿ. ರಾಜೀವ್ ಇಳಿದು ಬರುತ್ತಿದ್ದಂತೆ ರಸ್ತೆ ವಿಚಾರವಾಗಿ ಶಾಸಕರನ್ನು ಪ್ರಶ್ನಿಸಿದ್ದಾನೆ. ಕೋಪಗೊಂಡ ಶಾಸಕ ರಾಜೀವ್ ಯುವಕನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದ್ದಾರೆ.
ಕುಡಚಿ ಕ್ಷೇತ್ರದ ಯುವಕರು ಬಸ್ತವಾಡ ರಸ್ತೆ ಕಾಮಗಾರಿ ಕಳಪೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಶಾಸಕರ ವಿರುದ್ಧ ರಸ್ತೆ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲು ಎಷ್ಟು ಎಂದು ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಪ್ರಶ್ನಿಸಿದ್ದಾರೆ. ಜತೆಗೆ ಕ್ಷೇತ್ರದ ಸಮಸ್ಯೆಗಳನ್ನು ಶಾಸಕರಿಗೆ ಭಿತ್ತಿಪತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಯುವಕರು ಕ್ಷೇತ್ರದ ರಸ್ತೆಯ ಕಳಪೆ ಕಾಮಗಾರಿಯ ವಿರುದ್ಧ ಪ್ರಶ್ನಿಸುತ್ತಿದ್ದಂತೆ ಶಾಸಕ ಪಿ. ರಾಜೀವ್ ಗರಂ ಆಗಿದ್ದಾರೆ. ಈ ಭಿತ್ತಿ ಪತ್ರ ಪ್ರದರ್ಶಿಸಿದ ಯುವಕನ ಬಳಿ 'ಏನು ದಾಖಲೆ ಇದೆ ಇದಕ್ಕೆ?' ಎಂದು ಕೇಳಿದ್ದಾರೆ. ಈ ವೇಳೆ ಯುವಕರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ತಕ್ಷಣವೇ ಪಕ್ಕದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಯುವಕರನ್ನು ಅರೆಸ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಭ್ರಷ್ಟಾಚಾರದ ಮೇಲೆ ಕೇಸ್ ಮಾಡುವುದಾಗಿ ಶಾಸಕ ಪಿ. ರಾಜೀವ್ ಅವಾಜ್ ಹಾಕಿದ ಘಟನೆ ನಡೆದಿದೆ.