

ಢಾಕಾ: ಕ್ರಿಕೆಟ್ ಲೋಕದಲ್ಲಿ ಪ್ರಸ್ತುತ ಅತ್ಯಂತ ಯಶಸ್ವಿ ತಂಡ ಎಂದರೆ ಅದು ಟೀಮ್ ಇಂಡಿಯಾ (Team India). ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತರೆ ದೇಶಗಳಿಗೆ ಮಾದರಿಯಾಗಿ ಮಿಂಚುತ್ತಿರುವ ಭಾರತೀಯ ಕ್ರಿಕೆಟ್ ತಂಡ, ಸದ್ಯ ಹೊಸ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಇದೇ ವಿಷಯವನ್ನು ಉಲ್ಲೇಖಿಸಿ ಮಾತನಾಡಿದ ಬಾಂಗ್ಲಾದೇಶದ ಆಟಗಾರ ತಮೀಮ್ ಇಕ್ಬಾಲ್ (Tamim Iqbal), ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಯಶಸ್ಸಿಗೆ ಬಿಸಿಸಿಐ (BCCI) ಕಾರಣ. ಇದಕ್ಕೆ ನನ್ನ ಶ್ಲಾಘನೆಯಿದೆ ಎಂದು ಹೇಳಿದರು.
"ಅಗ್ರಸ್ಥಾನದಲ್ಲಿರುವ ವ್ಯಕ್ತಿಗಳು ತಾವು ಹಾಕಿಕೊಂಡಿರುವ ಗುರಿಯನ್ನು ತಲುಪಲು ಒಂದಷ್ಟು ಪ್ಲ್ಯಾನ್ಗಳನ್ನು ರೂಪಿಸಿರಬೇಕು. ತಂಡದ ಕ್ಯಾಪ್ಟನ್, ಕೋಚ್ ಮತ್ತು ಆಟಗಾರರು ಟ್ರೋಫಿಗಳನ್ನು ಗೆಲ್ಲುವ ಹಂಬಲ ವ್ಯಕ್ತಪಡಿಸುತ್ತಾರೆ. ಆದರೆ ಕ್ರಿಕೆಟ್ ಮಂಡಳಿಗೆ ಏನನ್ನು ನಿರೀಕ್ಷಿಸುತ್ತದೆ? ಅತ್ಯುತ್ತಮ ಪ್ರದರ್ಶನಕ್ಕೆ ನೀವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ಎಷ್ಟು ಸಾಧ್ಯವೋ ಅಷ್ಟು ಹೊಗಳಬಹುದು. ಆದರೆ, ಬಿಸಿಸಿಐ ಬಲಿಷ್ಠವಾಗಿಲ್ಲ ಎಂದಿದ್ದರೆ, ತಂಡವು ಇಷ್ಟರ ಮಟ್ಟಿಗೆ ಗುರುತಿಸಿಕೊಳ್ಳಲು ಹಾಗೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಿಳಿಸಿದರು.
"ನಮ್ಮ ಹಿಂದಿನ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಆಡಳಿತದಲ್ಲಿ, ಮೂವರು ಮಾಜಿ ನಾಯಕರು ಆಡಳಿತದ ಭಾಗವಾಗಿದ್ದರು. ಅವರೆಲ್ಲರೂ ತಪ್ಪು ಮಾಡಿದ್ದಾರೆಯೇ? ಇಲ್ಲ. ಅವರಿಂದಲೂ ಬಹಳಷ್ಟು ಒಳ್ಳೆಯ ಕೆಲಸಗಳು ಆಗಿವೆ. ನಾನು ಕೆಲವು ಜನರೊಂದಿಗೆ ಸಮಸ್ಯೆಗಳನ್ನು ಹೊಂದಿರಬಹುದು. ಹಾಗಂತ ಬಿಸಿಬಿ ಆಡಳಿತ ಕೆಟ್ಟದಾಗಿದೆ ಎಂದು ಅರ್ಥವಲ್ಲ. ಈ ಬಾರಿ, ಮಂಡಳಿಯ ಅಧ್ಯಕ್ಷರು ಕ್ರಿಕೆಟಿಗರಾಗಿದ್ದಾರೆ ಮತ್ತು ನಾವು ಅವರನ್ನು ನಿರ್ಣಯಿಸುವ ಮೊದಲು ಅವರಿಗೆ ಒಂದಷ್ಟು ಕಾಲಾವಕಾಶದ ಅಗತ್ಯವಿದೆ" ಎಂದು ತಮೀಮ್ ಬಾಂಗ್ಲಾ ಹಾಗೂ ಬಿಸಿಸಿಐ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ,(ಏಜೆನ್ಸೀಸ್).