

ನವದೆಹಲಿ: ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ ಇನ್ನೂ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದಕ್ಕಾಗಿ ಐಸಿಸಿ ಈಗಾಗಲೇ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಈ ಕಿರು ಸ್ಪರ್ಧೆಯಲ್ಲಿ ಟೀಮ್ ಇಂಡಿಯಾ ಎಲ್ಲರ ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿಯಲಿದೆ. ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಬೇಕಿದೆ. ಈ ವಿಚಾರದಲ್ಲಿ ಟೀಮ್ ಇಂಡಿಯಾಗೆ ಐಸಿಸಿ ಅನಿರೀಕ್ಷಿತ ಶಾಕ್ ನೀಡಿದ್ದು, ಇದರ ಪರಿಣಾಮ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದ ಮೇಲೆ ಬೀಳಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಷ್ಟಕ್ಕೂ ಐಸಿಸಿ ಟೀಮ್ ಇಂಡಿಯಾಗೆ ಕೊಟ್ಟ ಶಾಕ್ ಏನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯವನ್ನು ನ್ಯೂಯಾರ್ಕ್ ಮೈದಾನದಲ್ಲಿ ಆಡಲು ಟೀಮ್ ಇಂಡಿಯಾ ಯೋಚಿಸಿದೆ. ಅದಕ್ಕಾಗಿ ಐಸಿಸಿಗೆ ಬಿಸಿಸಿಐ ಮನವಿ ಕೂಡ ಸಲ್ಲಿಸಿದೆ. ಆದರೆ, ಬಿಸಿಸಿಐ ಮನವಿಯನ್ನು ಐಸಿಸಿ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆಯಂತೆ. ನ್ಯೂಯಾರ್ಕ್ ಹೊರತುಪಡಿಸಿ, ಫ್ಲೋರಿಡಾದಲ್ಲಿ ಅಭ್ಯಾಸ ಪಂದ್ಯವನ್ನು ಏರ್ಪಡಿಸಲಾಗಿದೆ.
ಫ್ಲೋರಿಡಾದಲ್ಲಿ ಅಭ್ಯಾಸ ಪಂದ್ಯ ಆಡುವುದರಿಂದ ಟೀಮ್ ಇಂಡಿಯಾಗೆ ಏನು ತೊಂದರೆ? ಎಂದು ನೋಡುವುದಾದರೆ, ವಿಶ್ವಕಪ್ನ ಅಂಗವಾಗಿ ಭಾರತ ನ್ಯೂಯಾರ್ಕ್ ಮೈದಾನದಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ವಿರುದ್ಧವೂ ನಿರ್ಣಾಯಕ ಪಂದ್ಯ ನ್ಯೂಯಾರ್ಕ್ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ನಡೆದರೆ ಪಿಚ್ನ ಸ್ವರೂಪ ಗೊತ್ತಾಗುತ್ತದೆ ಎಂಬುದು ಟೀಂ ಇಂಡಿಯಾದ ಯೋಚನೆ. ಅದಕ್ಕಾಗಿಯೇ ಅಭ್ಯಾಸ ಪಂದ್ಯವನ್ನು ಅಲ್ಲಿ ನಡೆಸಲು ಐಸಿಸಿಗೆ ಮನವಿ ಮಾಡಿದೆ.
ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎನ್ನಲಾಗಿದೆ. ಇದರಿಂದ ಟೀಮ್ ಇಂಡಿಯಾಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ನ್ಯೂಯಾರ್ಕ್ನಲ್ಲಿ ಅಭ್ಯಾಸ ಪಂದ್ಯ ನಡೆಯದಿರುವುದು ಟೀಂ ಇಂಡಿಯಾಗೆ ತೊಂದರೆ ಆಗಲಿದೆಯೇ? ಪಾಕ್ ಪಂದ್ಯದ ಮೇಲೆ ಪರಿಣಾಮ ಬೀರಲಿದೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)