ಒಡೆದ ಹೃದಯ: ದ. ಆಫ್ರಿಕಾ ಪ್ರವಾಸದ ಮಧ್ಯೆ ಸೂರ್ಯಕುಮಾರ್​ಗೆ ಶಾಕಿಂಗ್​ ನ್ಯೂಸ್​!

Suryakumar Yadav
Published on

ನವದೆಹಲಿ: ಮುಂಬರುವ 17ನೇ ಐಪಿಎಲ್ ಆವೃತ್ತಿಗೂ ಮುನ್ನ ರೋಹಿತ್​ ಶರ್ಮರನ್ನು ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಮುಂಬೈ ಫ್ರಾಂಚೈಸಿ ಅಚ್ಚರಿಗೆ ದೂಡಿದೆ. ಕೆಲವರಿಗೇನೋ ಇದು ಅಚ್ಚರಿಯಾದರೆ, ರೋಹಿತ್​ ಅಭಿಮಾನಿಗಳಿಗೆ ಇದೊಂದು ದೊಡ್ಡ ಶಾಕ್​ ಆಗಿದೆ.

ರೋಹಿತ್​ರನ್ನು ನಾಯಕತ್ವದಿಂದ ಕೆಳಗಿಳಿಸಿದ್ದನ್ನು ಅನೇಕರು ಖಂಡಿಸಿದ್ದಾರೆ. ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಇದರ ನಡುವೆ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಸೂರ್ಯಕುಮಾರ್​ ಯಾದವ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಸ್ಟೋರಿ ನಿಗೂಢವಾಗಿದ್ದರೂ ಅದು ರೋಹಿತ್​ರನ್ನೇ ಉದ್ದೇಶಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಸೂರ್ಯಕುಮಾರ್​ ಅವರು ಒಡೆದ ಹೃದಯದ ಎಮೋಜಿಯನ್ನು ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಯಾವುದೇ ಅಡಿಬರಹ ನೀಡದಿದ್ದರೂ ಅಭಿಮಾನಿಗಳು ಯಾದವ್​ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೂ ಯಾದವ್​ ಯಾವುದೇ ಸುಳಿವು ನೀಡದೇ ಇರುವುದು ಅಭಿಮಾನಿಗಳನ್ನು ಗೊಂದಲಕ್ಕೂ ದೂಡಿದೆ.

Yadv 1

ಇನ್ನು ರೋಹಿತ್​ ಮತ್ತು ಯಾದವ್​ ನಡುವೆ ಉತ್ತಮ ಬಾಂದವ್ಯ ಇರುವುದು ಎಲ್ಲರಿಗೂ ಗೊತ್ತಿದೆ. ಅನೇಕ ಬಾರಿ ಇದು ಸಾಬೀತು ಕೂಡ ಆಗಿದೆ. ರೋಹಿತ್​ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್​ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದೀಗ ರೋಹಿತ್​ರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿರುವುದು ಯಾದವ್​ಗೆ ತುಂಬಾ ಬೇಸರ ಉಂಟುಮಾಡಿದೆ. ತಮ್ಮ ನೋವನ್ನು ಒಡೆದ ಹೃದಯದ ಎಮೋಜಿ ಶೇರ್​ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರೋಹಿತ್​ ನಾಯಕತ್ವದಿಂದ ಕೆಳಗೆ ಇಳಿಸಿರುವುದು ಯಾದವ್​ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಂಬೈ ತಂಡದಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಸೂರ್ಯಕುಮಾರ್ ಯಾದವ್ ಅವರು ಇತ್ತೀಚೆಗೆ ಆಫ್ರಿಕಾದಲ್ಲಿ ನಡೆದ ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಈ ಸರಣಿ ಡ್ರಾದಲ್ಲಿ ಕೊನೆಗೊಂಡಿತು.

ಅಂದಹಾಗೆ ಇತ್ತೀಚೆಗಷ್ಟೇ ಗುಜರಾತ್​ ಟೈಟಾನ್ಸ್​ ತಂಡದಿಂದ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮುಂಬೈ ತಂಡ ಖರೀದಿ ಮಾಡಿತು. ಹಾರ್ದಿಕ್​ ಅವರನ್ನು ಮುಂಬರುವ ಐಪಿಎಲ್​ 17ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್​ ಪರ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದಿದ್ದ ರೋಹಿತ್​ ಶರ್ಮ ಅವರ “ಐಪಿಎಲ್​ ನಾಯಕತ್ವ ಯುಗ’ ಅಂತ್ಯಗೊಂಡಂತಾಗಿದೆ. ಅಲ್ಲದೆ ಐಪಿಎಲ್​ನಲ್ಲಿ ಮೊದಲ ಬಾರಿಗೆ ಟೀಮ್​ ಇಂಡಿಯಾದ ಪೂರ್ಣಪ್ರಮಾಣದ ನಾಯಕನೊಬ್ಬ ಸಾಮಾನ್ಯ ಆಟಗಾರನಾಗಿ ಆಡುವಂತಾಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸ್ಪಷ್ಟನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net