ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಬದಲಾವಣೆ; ಫ್ರಾಂಚೈಸಿ ನೀಡಿದ ಕಾರಣ ಹೀಗಿದೆ...

hardik web
Published on

ಮುಂಬೈ: ಇತ್ತೀಚೆಗಷ್ಟೇ ಗುಜರಾತ್​ ಟೈಟಾನ್ಸ್​ ತಂಡದಿಂದ ವರ್ಗಾವಣೆಗೊಂಡಿದ್ದ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅವರನ್ನು ಮುಂಬರುವ ಐಪಿಎಲ್​ 17ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್​ ತಂಡದ ಹೊಸ ನಾಯಕರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್​ ಪರ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದಿದ್ದ ರೋಹಿತ್​ ಶರ್ಮ ಅವರ "ಐಪಿಎಲ್​ ನಾಯಕತ್ವ ಯುಗ' ಅಂತ್ಯಗೊಂಡಂತಾಗಿದೆ. ಅಲ್ಲದೆ ಐಪಿಎಲ್​ನಲ್ಲಿ ಮೊದಲ ಬಾರಿಗೆ ಟೀಮ್​ ಇಂಡಿಯಾದ ಪೂರ್ಣಪ್ರಮಾಣದ ನಾಯಕನೊಬ್ಬ ಸಾಮಾನ್ಯ ಆಟಗಾರನಾಗಿ ಆಡುವಂತಾಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸ್ಪಷ್ಟನೆ ನೀಡಿದೆ.

ಕಳೆದ ಆವೃತ್ತಿಗಳಿಂದ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸುತ್ತಿದ್ದ ಹಾರ್ದಿಕ್​, ತಂಡವನ್ನು ಒಮ್ಮೆ ಚಾಂಪಿಯನ್​, ಒಮ್ಮೆ ರನ್ನರ್​ಅಪ್​ ಆಗಿಸಿದ್ದರು. ಕಳೆದ ತಿಂಗಳು 15 ಕೋಟಿ ರೂ. ಸಂಭಾವನೆಯೊಂದಿಗೆ ಅಚ್ಚರಿಯ ರೀತಿಯಲ್ಲಿ ಮುಂಬೈ ತಂಡಕ್ಕೆ ಮರಳಿದ್ದರು. ಈ ಮುನ್ನ 2015ರಿಂದ 2021ರವರೆಗೆ ಮುಂಬೈ ತಂಡದ ಆಟಗಾರರಾಗಿದ್ದ ಹಾರ್ದಿಕ್​ ಮೊದಲ ಬಾರಿಗೆ ಈ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.

ಭವಿಷ್ಯದ ಯೋಜನೆಯ ಅನ್ವಯ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ವಹಿಸಲಾಗಿದೆ. ರೋಹಿತ್​ ಶರ್ಮ ಅವರ ನಾಯಕತ್ವಕ್ಕೂ ಕೃತಜ್ಞರಾಗಿರುವೆವು. ಅವರ ನಾಯಕತ್ವದಲ್ಲಿ ತಂಡ ಅಮೋ ಯಶಸ್ಸು ಕಂಡಿದೆ. ಐಪಿಎಲ್​ ಇತಿಹಾಸ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್​, ಮುಂದೆಯೂ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮತ್ತು ತಂಡದೊಂದಿಗೆ ಅನುಭವವನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿರುವೆವು ಎಂದು ಮುಂಬೈ ತಂಡದ ಗ್ಲೋಬಲ್​ ಹೆಡ್​ ಮಹೇಲ ಜಯವರ್ಧನೆ ತಿಳಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ತಂಡದ 5ನೇ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಸಚಿನ್​ ತೆಂಡುಲ್ಕರ್​, ಹರ್ಭಜನ್​ ಸಿಂಗ್​, ರಿಕಿ ಪಾಂಟಿಂಗ್​, ರೋಹಿತ್​ ಶರ್ಮ ಹಿಂದಿನ ನಾಯಕರು. ಈ ನಡುವೆ ಶಾನ್​ ಪೊಲ್ಲಾಕ್​, ಡ್ವೇನ್​ ಬ್ರಾವೊ, ಕೈರಾನ್​ ಪೊಲ್ಲಾರ್ಡ್​, ಸೂರ್ಯಕುಮಾರ್​ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net