ಬಿಸಿಸಿಐ ವಿರುದ್ಧ ಸುರೇಶ್​ ರೈನಾ ಅಭಿಮಾನಿಗಳು ಸಿಟ್ಟಾಗಿದ್ಯಾಕೆ..?

suresh fans for web
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಧೋನಿ ನಿವೃತ್ತಿ ಘೋಷಿಸಿದ ಕೆಲ ಕ್ಷಣದಲ್ಲೇ ಅವರ ಪರಮಾಪ್ತ ಸುರೇಶ್​ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದರು. 13 ವರ್ಷದ ರಾಷ್ಟ್ರೀಯ ತಂಡದ ಭಾಗವಾಗಿದ್ದ ರೈನಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಿದ್ದರು. ರಾಷ್ಟ್ರೀಯ ತಂಡ ಪ್ರತಿನಿಧಿಸಿ ನಿವೃತ್ತಿ ಘೋಷಿಸುವ ಆಟಗಾರರಿಗೆ ಬಿಸಿಸಿಐ, ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿ, ಮಾಧ್ಯಮ ಪ್ರಕಟಣೆ ಹೊರಡಿಸುವುದು ವಾಡಿಕೆ. ಆದರೆ, ಸುರೇಶ್​ ರೈನಾ ವಿಚಾರದಲ್ಲಿ ಮಾತ್ರ ಬಿಸಿಸಿಐ ವಿಭಿನ್ನ ನಿಲುವು ತಳೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೆ, ಬಿಸಿಸಿಐ ವಿರುದ್ಧ ರೈನಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಭಾರತ ತಂಡದ ನಿಗದಿತ ಓವರ್​ಗಳಲ್ಲಿ ಎಂಎಸ್​ ಧೋನಿ ಹಾಗೂ ಸುರೇಶ್​ ರೈನಾ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಜೋಡೆತ್ತುಗಳಂತೆ ಇದ್ದರು. ಅದೆಷ್ಟೋ ಇನಿಂಗ್ಸ್​ಗಳಲ್ಲಿ ತಂಡಕ್ಕೆ ಆಸರೆಯಾಗಿದೆ ಈ ಜೋಡಿ. ಒಟ್ಟಾರೆ 73 ಇನಿಂಗ್ಸ್​ ಜತೆಯಾಗಿ ಆಡಿರುವ ಈ ಜೋಡಿ ಸರಾಸರಿ 56.90 ರಂತೆ 3585 ರನ್​ ಕಲೆಹಾಕಿತ್ತು. 2011ರ ಏಕದಿನ ವಿಶ್ವಕಪ್​ ವಿಜೇತ ಧೋನಿ ಸಾರಥ್ಯದ ತಂಡದಲ್ಲೂ ರೈನಾ ಇದ್ದರು. ಇದಾದ 2 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಐಸಿಸಿ ಚಾಂಪಿಯನ್​ ಟ್ರೋಫಿ ವಿಜೇತ ತಂಡದಲ್ಲೂ ರೈನಾ ಇದ್ದರು. ಒಟ್ಟಾರೆ 18 ಟೆಸ್ಟ್​, 226 ಏಕದಿನ ಹಾಗೂ 78 ಟಿ20 ಪಂದ್ಯಗಳಿಂದ 9 ಸಾವಿರ ರನ್​ ಗಳಿಸಿದ್ದಾರೆ.

ಮಿ.ಐಪಿಎಲ್​ ಎನಿಸಿಕೊಂಡಿರುವ ರೈನಾ, ಇದುವರೆಗೂ 193 ಪಂದ್ಯಗಳಿಂದ 5368 ರನ್​ ಕೆಲಹಾಕಿದ್ದಾರೆ. 13 ವರ್ಷಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿರುವ ಆಟಗಾರನಿಗೆ ಧೋನಿ ಜತೆಯಲ್ಲೇ ಬಿಸಿಸಿಐ ಶುಭ ಕೋರಬಹುದಿತ್ತು ಎಂದು ರೈನಾ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net