

ನವದೆಹಲಿ: ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿ ಇನ್ನೇನು ಕಡೆಯ ಹಂತವನ್ನು ತಲುಪಿದ್ದು, ಶೀಘ್ರವೇ ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಆದರೆ, ಸೀಸನ್ ಇನ್ನೂ ಮುಗಿದೇ ಇಲ್ಲ, ಆಗಲೇ ಮುಂಬರುವ ಟಿ20 ವಿಶ್ವಕಪ್ಗಾಗಿ ಐಪಿಎಲ್ನಲ್ಲಿ ತಮ್ಮ ತಂಡವನ್ನು ತೊರೆದು ಹೋಗಿರುವ ಆಟಗಾರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಟೀಂ ಇಂಡಿಯಾದ ಮಾಜಿ ಆಟಗಾರ, ದಿಗ್ಗಜ, ಸುನಿಲ್ ಗವಾಸ್ಕರ್ ಗುಡುಗಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ವಿರುದ್ಧ ಸಿಡಿದೆದ್ದ ಗವಾಸ್ಕರ್, "ನನಗೆ ನನ್ನ ದೇಶವೇ ಮೊದಲು. ಒಂದು ತಂಡಕ್ಕೆ ಆಡುತ್ತೀನಿ ಎಂದು ಒಪ್ಪಿಗೆ ಸೂಚಿಸಿ, ಒಪ್ಪಂದ ಮಾಡಿಕೊಳ್ಳುವ ವಿದೇಶಿ ಆಟಗಾರರು, ಐಪಿಎಲ್ ಪೂರ್ಣಗೊಳ್ಳುವವರೆಗೂ ತಮ್ಮ ಟೀಮ್ಗೆ ಕೊಡುಗೆ ನೀಡಿಯೇ ಹೋಗಬೇಕು. ಅದನ್ನು ಬಿಟ್ಟು ಈ ರೀತಿ ಮಧ್ಯದಲ್ಲೇ ತಂಡಕ್ಕೆ ಕೈಕೊಟ್ಟು ಹೋಗುವುದು ಎಷ್ಟು ಸರಿ? ಇಂಥವರ ವಿರುದ್ಧ ನೀವು ಕಠಿಣ ಕ್ರಮ ಜರುಗಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಇಡೀ ಸೀಸನ್ ಇದೇ ತಂಡಕ್ಕೆ ಆಡುತ್ತೀನಿ ಎಂದು ಒಪ್ಪಂದ ಮಾಡಿಕೊಂಡ ಮೇಲೆ ಅದನ್ನು ಪೂರ್ಣಗೊಳಿಸಿ ಹೋಗುವುದು ಅವರ ಕರ್ತವ್ಯ. ನಿಮ್ಮ ಜವಾಬ್ದಾರಿಯನ್ನು ಮುಗಿಸಿ, ಆನಂತರ ಉಳಿದ ಕೆಲಸಗಳನ್ನು ಮಾಡಿಕೊಳ್ಳಿ. ಅರ್ಧಕ್ಕೆ ಬಿಟ್ಟು ಹೋಗುವುದರಿಂದ ಫ್ರಾಂಚೈಸಿಗೆ ತೊಂದರೆ ಮಾಡಿ, ನೀವು ಹಣ ಮಾಡಿಕೊಳ್ಳುತ್ತೀರಿ. ಇದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ವಾಣಿಜ್ಯ ಶಿಕ್ಷಣ ಕುರಿತು 14ರಿಂದ ವಿಚಾರ ಸಂಕಿರಣ
"ಆಯಾ ಫ್ರಾಂಚೈಸಿಯವರು ಯಾವ ಆಟಗಾರ ತಮ್ಮ ತಂಡವನ್ನು ಬಿಟ್ಟು ಹೋಗಿದ್ದಾರೋ, ಅವರನ್ನು ಖರೀದಿ ಮಾಡಿದ ಹಣದಲ್ಲಿ ಒಂದಷ್ಟು ಕಡಿತಗೊಳಿಸಬೇಕು. ಇದರ ಜತೆಗೆ ಆಟಗಾರ ಪಡೆಯುವ ಶೇ.10 ರಷ್ಟು ಕಮಿಷನ್ ಕ್ರಿಕೆಟ್ ಮಂಡಳಿಗೆ ಹೋಗಬಾರದು. ತಮ್ಮ ದೇಶದ ಆಟಗಾರರ ಆಟವನ್ನು ಮುಂದುವರೆಯದಂತೆ ತಡೆಹಿಡಿಯುವ ಕ್ರಿಕೆಟ್ ಮಂಡಳಿಗೂ ಸಹ ದಂಡ ವಿಧಿಸಬೇಕು" ಎಂದಿದ್ದಾರೆ,(ಏಜೆನ್ಸೀಸ್).