

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 17ನೇ ಆವೃತ್ತಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿತ್ತು. ಈ ವೇಳೆ ಟೈಟನ್ಸ್ ನೀಡಿದ ಬೃಹತ್ ರನ್ಗಳ ಗುರಿಯನ್ನು ಚೇಸಿಂಗ್ ಮಾಡುತ್ತಿದ್ದ ಸಿಎಸ್ಕೆ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳು ಯಾವ ಕ್ಷಣಕ್ಕಾಗಿ ಕಾದು ಕುಳಿತ್ತಿದ್ದರೋ ಅದನ್ನು ಈಡೇರಿಸುವಲ್ಲಿ ಎಂದಿನಂತೆ ಸಫಲರಾದರು.
ಈ ಹಿಂದಿನ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬರುತ್ತಿದ್ದ ಧೋನಿ ಕಳೆದೆರೆಡು ಪಂದ್ಯಗಳಿಂದ 7,8,9ನೇ ಆರ್ಡರ್ನಲ್ಲಿ ಬ್ಯಾಟ್ ಮಾಡಲು ಬರುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದರು, ಕಾರಣ ಹುಡುಕಲು ಹೋಗುವುದಿಲ್ಲ. ಯಾಕಂದ್ರೆ, ಫ್ಯಾನ್ಸ್ಗೆ ಬೇಕಿರುವುದು ಮಾಹಿಯ ಆಟ ಮಾತ್ರ. ಮ್ಯಾಚ್ ಮುಗಿಯುವುದರೊಳಗೆ ಧೋನಿ ಕಂಡರೆ ಸಾಕಾಗಿದೆ. ಸ್ಟೇಡಿಯಂ ತುಂಬ ಧೋನಿ ನಂಬರ್ ಜೆರ್ಸಿ ಹಾಕಿಕೊಂಡು ಬರುವ ವೀಕ್ಷಕರು, ಅವರನ್ನು ಮೈದಾನದಲ್ಲಿ ನೋಡಲು ಪಂದ್ಯದ ಕಡೆಯವರೆಗೂ ಕಾದು ಕುಳಿತಿರುತ್ತಾರೆ. ಇದು ಅವರ ಮೇಲಿರುವ ಪ್ರೀತಿ-ಅಭಿಮಾನವನ್ನು ತೋರುತ್ತದೆ.
ನಿನ್ನೆಯ ಪಂದ್ಯದಲ್ಲಿ ಗುಜರಾತ್ ಎದುರು ಸಿಎಸ್ಕೆ ಸೋಲು ನೋಡುವುದು ಖಚಿತ ಎನ್ನುವುದು ತಿಳಿದರೂ ಸಹ ಅಭಿಮಾನಿಗಳು ಮಾತ್ರ ಧೋನಿಯ ಅಬ್ಬರದ ಬ್ಯಾಟಿಂಗ್ಗೆ ಎದುರುನೋಡುತ್ತಿದ್ದರು. ಅದರಂತೆಯೇ 11 ಬಾಲ್ಗಳನ್ನು ಎದುರಿಸಿದ ಕ್ಯಾಪ್ಟನ್ ಕೂಲ್ ಮೂರು ಸಿಕ್ಸರ್, ಒಂದು ಫೋರ್ ಬಾರಿಸುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಆದರೆ, ಈ ಮಧ್ಯೆ ಮೈದಾನದೊಳಗೆ ಓಡಿಬಂದ ಧೋನಿಯ ಅಪ್ಪಟ ಫ್ಯಾನ್ ಒಬ್ಬರು, ಸೆಕ್ಯೂರಿಟಿಗಳ ಕಣ್ತಪ್ಪಿಸಿ, ಮಾಹಿಯ ಪಾದ ಸ್ಪರ್ಶಿಸಿ ನಮಸ್ಕರಿಸಿ, ಅವರಿಂದ ಕಿವಿಮಾತು ಪಡೆದು ಅಲ್ಲಿಂದ ಕಾಲ್ಕಿತ್ತರು.
26 ರನ್ಗಳಿಸಿದ ಸಿಎಸ್ಕೆ ಮಾಜಿ ಕ್ಯಾಪ್ಟನ್, ಈ ರೀತಿ ಓಡಿಬರಬೇಡಿ, ಹೋಗಿ ಎಂದು ಆತನಿಗೆ ಆರ್ಶಿವದಿಸಿ ಅಲ್ಲಿಂದ ಕಳಿಸಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟ್ ದಿಗ್ಗಜನ ಪಾದ ಸ್ಪರ್ಶಿಸಿದ ಅಭಿಮಾನಿ, ಇಂದು ನಾನೇ ಧನ್ಯ ಎಂದು ಪೆವಿಲಿಯನ್ನತ್ತ ಹೋಗಿದ್ದಾನೆ. ಸದ್ಯ ಈ ದೃಶ್ಯ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಮಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಾವು, ನಿಮ್ಮನ್ನು ನೋಡಲು ಬಹಳ ಉತ್ಸುಕರಾಗಿ ಕಾಯುತ್ತಾ ಇರುತ್ತೀವಿ. ನೀವಿಲ್ಲದ ಐಪಿಎಲ್ ಊಹಿಸಿಕೊಳ್ಳುವುದು ಕಷ್ಟ ಎಂದು ಫ್ಯಾನ್ಸ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).