ಟ್ಯೂಷನ್​ಗೆ ಬಂದ ವಿದ್ಯಾರ್ಥಿ ಹತ್ಯೆ ಮಾಡಿ ಅಪಹರಣ ನಾಟಕವಾಡಿದ್ದ ಶಿಕ್ಷಕಿ-ಆಕೆಯ ಪ್ರಿಯಕರ!

murder
Published on

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 17 ವರ್ಷದ ಬಾಲಕನ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಶಿಕ್ಷಕಿಯ ಪ್ರಿಯಕರ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

10ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕನನ್ನು ಟ್ಯೂಷನ್ ಶಿಕ್ಷಕಿ ರಚಿತಾರ ಪ್ರಿಯಕರ ಪ್ರಭಾತ್ ಶುಕ್ಲಾ ತನ್ನ ಸ್ಟೋರ್ ರೂಮ್‌ಗೆ ಕರೆದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನನ್ನು ರಚಿತಾ ಕರೆಯುತ್ತಿರುವುದಾಗಿ ತಿಳಿಸಿ ಪ್ರಭಾತ್ ತನ್ನ ಸ್ಟೋರ್​ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಹುಡುಗ ಮತ್ತು ಪ್ರಭಾತ್ ಒಟ್ಟಿಗೆ ಕೋಣೆಗೆ ಪ್ರವೇಶಿಸುವುದನ್ನು ಸಿಸಿ ಕ್ಯಾಮೆರಾದಲ್ಲಿ ಕಾಣಬಹುದು. ಸುಮಾರು 20 ನಿಮಿಷದ ನಂತರ ಪ್ರಭಾತ್ ಹೊರಬರುತ್ತಾನೆ, ಆದರೆ ಹುಡುಗ ಹೊರಬರಲಿಲ್ಲ. ನಂತರ ಯಾರೂ ಆ ಕೊಠಡಿಗೆ ಪ್ರವೇಶಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆರೋಪಿ ಪ್ರಭಾತ್ ಬಟ್ಟೆ ಬದಲಾಯಿಸಿ ಬಾಲಕನ ಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡು ಬಂದಿದೆ. ಪ್ರಕರಣದ ತನಿಖೆ ನಂತರ ಪ್ರಭಾತ್,ಆತನ ಪ್ರೇಯಸಿ ರಚಿತಾ ಮತ್ತು ಅವರ ಸ್ನೇಹಿತ ಆರ್ಯನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕನ ನಾಪತ್ತೆ ನಂತರ ಹಣಕ್ಕೆ ಒತ್ತಾಯಿಸಿ ಬಾಲಕನ ಕುಟುಂಬಕ್ಕೆ ಪತ್ರವೂ ಬಂದಿತ್ತು. ಆದರೆ ಪತ್ರ ತಲುಪುವ ಮುನ್ನವೇ ಬಾಲಕನನ್ನು ಹತ್ಯೆ ಮಾಡಲಾಗಿತ್ತು. ಬೆದರಿಕೆ ಪತ್ರವು ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಉದ್ದೇಶ ಇನ್ನೂ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net