ನನ್ನನ್ನು ನನ್ನ ಸಂಗಾತಿಯನ್ನು ವಿಚಿತ್ರವಾಗಿ ನೋಡಿದರೂ ಬೇಸರವಿಲ್ಲ ಎಂದ ಸ್ಪ್ರಿಂಟರ್ ದ್ಯುತಿ ಚಂದ್

Dutee-Chand_web-1
Published on

ನವದೆಹಲಿ: ಭಾರತದ ಸ್ಟಾರ್ ಸ್ಪ್ರಿಂಟರ್ ದ್ಯುತಿ ಚಂದ್ ಸಹೋದರ ಸಂಬಂಧಿ ಮಹಿಳೆಯೊಂದಿಗೆ ಸಂಬಂಧ ಇರುವುದನ್ನು ಕಳೆದ ವರ್ಷವೇ ಬಹಿರಂಗಪಡಿಸಿದ್ದರು. ಇದು ಸಮಾಜಕ್ಕೆ ವಿಚಿತ್ರ ಎನಿಸಿದರೂ ದ್ಯುತಿ ಚಂದ್ ಮಾತ್ರ ಯಾವುದಕ್ಕೂ ಕೇರ್ ಮಾಡಿರಲಿಲ್ಲ. ಸ್ವತಃ ಮನೆಯವರ ವಿರೋಧದ ನಡುವೆಯೂ ದ್ಯುತಿ ಚಂದ್ ಆಕೆಯೊಂದಿಗೆ ವಾಸಿಸುತ್ತಿದ್ದಾರೆ. ಇದೀಗ ತಮ್ಮ ಸಂಬಂಧದ ಕುರಿತು ಮತ್ತೊಮ್ಮೆ ಪ್ರತಿಕ್ರಿಯಿಸಿರುವ ದ್ಯುತಿ, ನನ್ನ ಹಾಗೂ ನನ್ನ ಪಾರ್ಟನರ್ ಕುರಿತು ಯಾರು ಏನೇ ಹೇಳಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.  ತಮ್ಮ ಸಲಿಂಗಿ ಪ್ರೀತಿ ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸದ್ಯ ಭಾರತದ ಅತಿವೇಗದ ಓಟಗಾರ್ತಿ ಎನಿಸಿಕೊಂಡಿರುವ ಓಡಿಶಾದ 24 ವರ್ಷದ ದ್ಯುತಿ ಚಂದ್, ಬುಧವಾರ ಹೈದರಾಬಾದ್‌ನಲ್ಲಿ ಯುಎಸ್ ಕೌನ್ಸುಲ್ ಜನರಲ್ ಅವರೊಂದಿಗೆ ನಡೆದ ಆನ್‌ಲೈನ್ ಸಂವಾದದಲ್ಲಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಭಾವನೆಗಳಿರುತ್ತವೆ. ಯಾರು ಯಾರ ಪ್ರೀತಿ ಬಲೆಗೆ ಬೇಕಾದರೂ ಬೀಳಬಹುದು. ಅದಕ್ಕೆ ಜಾತಿ, ಧರ್ಮ ಅಥವಾ ಲಿಂಗ ಭೇದವಿಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಅವರು, ಜನರು ಏನು ಬೇಕಾದರೂ ಕರೆಯಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇದು ನಮ್ಮ ಜೀವನ, ನಮ್ಮ ಸಂತೋಷ, ಯಾರು ಹೆದರಿಸುವ ಕೆಲಸ ಮಾಡಬೇಡಿ ಎಂದಿದ್ದಾರೆ.

ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಓಟವನ್ನು 11.32 ಸೆಕೆಂಡ್‌ಗಳಲ್ಲಿ ಕ್ರಮಿಸಿ ಸ್ವರ್ಣ ಜಯಿಸುವ ಮೂಲಕ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ದ್ಯುತಿ ಬೆಳಕಿಗೆ ಬಂದರು. 100 ಮೀಟರ್ ಓಟದಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದ್ಯುತಿ, 11.26 ಸೆಕೆಂಡ್‌ಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 2018ರ ಏಷ್ಯಾಡ್‌ನಲ್ಲಿ 100 ಹಾಗೂ 200 ಮೀಟರ್‌ನಲ್ಲಿ ಬೆಳ್ಳಿ ಜಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net