

ನವದೆಹಲಿ: ಚೀನಾ ಜತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ನಿಷೇಧಿಸಿರುವ 59 ಆ್ಯಪ್ಗಳಲ್ಲಿ ಟಿಕ್ಟಾಕ್ ಕೂಡ ಸೇರಿದೆ. ಈ ವಿಡಿಯೋ-ಷೇರಿಂಗ್ ಸೋಷಿಯಲ್ ನೆಟ್ವರ್ಕಿಂಗ್ ಆ್ಯಪ್ ಬ್ಯಾನ್ ಆಗಿದ್ದಕ್ಕೆ ಭಾರತದ ಒಲಿಂಪಿಯನ್ ಮಹಿಳಾ ಶೂಟರ್ ಹೀನಾ ಸಿಧು ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣವೇನು ಗೊತ್ತೇ?
ಚೀನಾದ ಟಿಕ್ಟಾಕ್ ಆ್ಯಪ್ ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಹೀನಾ ಸಿಧು, 'ಟಿಕ್ಟಾಕ್ ಮರೆಯಾಗಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ದ್ವೇಷದ ವಿಡಿಯೋಗಳು ಮತ್ತು ಪ್ರಾಣಿಗಳಿಗೆ ಹಿಂಸೆ ನೀಡುವ ವಿಡಿಯೋಗಳು ಟಿಕ್ಟಾಕ್ನಲ್ಲಿ ಪೋಸ್ಟ್ ಆಗುತ್ತಿದ್ದುದನ್ನು ನೋಡಿ ಬೇಸರವಾಗುತ್ತಿತ್ತು. ಟಿಕ್ಟಾಕ್ ಇಲ್ಲದೆ ಇನ್ನು ಇಂಟರ್ನೆಟ್ ಖುಷಿಯ ತಾಣವಾಗಿರುತ್ತದೆ' ಎಂದು ಟ್ವೀಟಿಸಿದ್ದಾರೆ.
'ಚೀನಾದ ಆ್ಯಪ್ ಹೋಗಿದ್ದರೂ, ಅದಕ್ಕೆ ಬದಲಿಯಾಗಿ ಸಿದ್ಧಗೊಳ್ಳುವ ಆ್ಯಪ್ನಲ್ಲಿ ಹಿಂಸಾತ್ಮಕ ವಿಡಿಯೋಗಳಿಗೆ ಖಂಡಿತವಾಗಿಯೂ ಅವಕಾಶ ನೀಡಬಾರದು. ಈ ಜವಾಬ್ದಾರಿ ಡೆವಲಪರ್ಗಳಿಗೆ ಇರಬೇಕು. ಈ ವಿಡಿಯೋಗಳು ಕೇವಲ ಪೋಸ್ಟ್ ಆಗುವುದು ಮಾತ್ರವಲ್ಲದೆ, ವೈರಲ್ ಕೂಡ ಆಗುವುದು ಬೇಸರದ ಸಂಗತಿ. ಅಪ್ಲೋಡ್ ಮಾಡುವ ವಿಡಿಯೋದಲ್ಲಿನ ಅಂಶಗಳನ್ನು ನಿರ್ಬಂಧಿಸದ ಹೊರತಾಗಿ ಇಂಥ ಆ್ಯಪ್ಗಳು ನಮ್ಮ ಜೀವನದಲ್ಲಿ ಸ್ಥಾನ ಪಡೆಯಬಾರದು' ಎಂದು ಹೀನಾ ಸಿಧು ಇನ್ನೊಂದು ಟ್ವೀಟ್ನಲ್ಲಿ ವಿವರಿಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಶೂಟರ್ ಆಗಿರುವ ಹೀನಾ ಸಿಧು, ಶೂಟಿಂಗ್ ವಿಶ್ವಕಪ್ನಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ.