ಮಹಿಳೆಯ ಮೇಲೆ ಅತ್ಯಾಚಾರ: ಆಸ್ಟ್ರೇಲಿಯಾದಲ್ಲಿ ಲಂಕಾ ಕ್ರಿಕೆಟಿಗ ಅರೆಸ್ಟ್​, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಡ್ನಿ ಪೊಲೀಸ್​

Gunatilaka
Published on

ಸಿಡ್ನಿ: ಅತ್ಯಾಚಾರ ಆರೋಪ ಹೊತ್ತಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕರನ್ನು ಬಂಧಿಸಲಾಗಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯುತ್ತಿದ್ದು, ಶ್ರೀಲಂಕಾ ತಂಡದಲ್ಲಿ ಆಡುತ್ತಿದ್ದ ಗುಣತಿಲಕರನ್ನು ಸಿಡ್ನಿಯಲ್ಲಿ ಬಂಧಿಸಿರುವುದಾಗಿ ತಂಡದ ಮೂಲಗಳು ತಿಳಿಸಿವೆ.

ನವೆಂಬರ್ 2ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ತನಿಖೆಯ ನಂತರ 31 ವರ್ಷದ ಗುಣತಿಲಕ ಅವರನ್ನು ಭಾನುವಾರ ನಸುಕಿನ ಜಾವ ಬಂಧಿಸಿ, ಸಿಡ್ನಿ ನಗರ ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪದಲ್ಲಿ ಬಂಧನವಾಗಿರುವ ಗುಣತಿಲಕರನ್ನು ಅಲ್ಲಿಯೇ ಬಿಟ್ಟು ತಂಡವು ತವರಿಗೆ ಮರಳಿದೆ ಎಂದು ಶ್ರೀಲಂಕಾ ತಂಡದ ಮೂಲಗಳು ಮಾಹಿತಿ ನೀಡಿವೆ.

ಎಡಗೈ ಬ್ಯಾಟರ್​ ಆಗಿರುವ ಗುಣತಿಲಕ T20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಆಡಿದರು ಮತ್ತು ಡಕ್‌ಗೆ ಔಟಾದರು. ಇದಾದ ಬಳಿಕ ಗಾಯದ ಕಾರಣದಿಂದಾಗಿ ಟೂರ್ನಿಯಿಂದಲೇ ಹೊರಗಾಕಲಾಯಿತು. ಇದೀಗ ರೇಪ್​ ಕೇಸ್​ನಲ್ಲಿ ಬಂಧನವಾಗಿದ್ದಾರೆ.

ಸಿಡ್ನಿ ಪೊಲೀಸರ ಪ್ರಕಾರ ಕಳೆದ ವಾರ ರೋಸ್​ ಬೇನಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ದೂರು ದಾಖಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನ ಮೂಲಕ ಹಲವಾರು ದಿನಗಳವರೆಗೆ ಆರೋಪಿ ಜೊತೆ ಸಂವಹನ ನಡೆಸಿದ ನಂತರ ಮಹಿಳೆಯು ಆ ವ್ಯಕ್ತಿಯನ್ನು ಭೇಟಿಯಾದಳು. ಇದಾದ ಬಳಿಕ ನ.2ರಂದು ಸಂಜೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದು, ಬಂಧಿತ ಆರೋಪಿ ಶ್ರೀಲಂಕಾದ ಕ್ರಿಕೆಟಿಗ ಎಂಬುದು ತಿಳಿದುಬಂದಿದೆ.

ಈ ವಿಚಾರವಾಗಿ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಈವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net