

Dunith Wellalage : ಪ್ರತಿಷ್ಠಿತ ಏಷ್ಯಾಕಪ್ ಟೂರ್ನಮೆಂಟ್ ನಡೆಯುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಈ ಮೆಗಾ ಟೂರ್ನಿಯ ನಡುವೆ ಮನಕಲಕುವ ಘಟನೆಯೊಂದು ನಡೆದು ಹೋಗಿದೆ. ಅದೇನೆಂದರೆ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಮಧ್ಯೆ ಲಂಕಾ ಆಟಗಾರನ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಈ ವಿಚಾರವನ್ನು ಪಂದ್ಯದ ಮುಗಿದ ಮೇಲೆ ಆಟಗಾರನಿಗೆ ತಿಳಿಸಲಾಗಿದೆ.
ಹೌದು, ಲಂಕಾ ಆಟಗಾರ ದುನಿತ್ ವೆಲ್ಲಾಲಗೆ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಗುರುವಾರ (ಸೆ.18) ಅಫ್ಘಾನಿಸ್ತಾನದ ವಿರುದ್ಧ ಅಬುಧಾಬಿಯ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ಏಷ್ಯಾ ಕಪ್ ಪಂದ್ಯ ಆಡುವಾಗ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಲಂಕಾ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯದ ಬಳಿಕ ಡಗೌಟ್ಗೆ ಬಂದ ವೆಲ್ಲಾಲಗೆ ತುಂಬಾ ದುಃಖದ ಸುದ್ದಿಯೊಂದು ಕಾದಿತ್ತು. ಪಂದ್ಯದ ನಡುವೆಯೇ ಅವರ ತಂದೆ ಕೊನೆಯುಸಿರೆಳೆದಿದ್ದರು. ಲಂಕಾ ತಂಡದ ಕೋಚ್ ಸನತ್ ಜಯಸೂರ್ಯ ಅವರು ಮೈದಾನದಲ್ಲೇ ವೆಲ್ಲಾಲಗೆ ಅವರಿಗೆ ದುರಂತ ಸುದ್ದಿಯನ್ನು ತಿಳಿಸುತ್ತಿರುವ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಜಯಸೂರ್ಯ ಮತ್ತು ವೆಲ್ಲಾಲಗೆ ಮಾತುಕತೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಲಂಕಾ ತಂಡದ ಮುಖ್ಯ ತರಬೇತುದಾರ ಜಯಸೂರ್ಯ ವೆಲ್ಲಾಲಗೆ ಅವರ ಭುಜದ ಸುತ್ತ ಕೈ ಹಾಕಿ, ಕುಟುಂಬದಲ್ಲಿ ನಡೆದ ದುರಂತದ ಬಗ್ಗೆ ಸಾಂತ್ವನ ಹೇಳಿದ್ದಾರೆ.
ದುನಿತ್ ವೆಲ್ಲಾಲಗೆ ಅವರ ತಂದೆ ಸುರಂಗ ಸ್ವಲ್ಪ ಸಮಯದ ಹಿಂದಷ್ಟೇ ನಿಧನರಾದರು. ಅವರು ಸ್ವಲ್ಪ ಸಮಯದವರೆಗೆ ಕ್ರಿಕೆಟ್ ಕೂಡ ಆಡಿದ್ದರು. ಶಾಲಾ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರ ಎಷ್ಟು ದೊಡ್ಡದಾಗಿದೆ ಎಂದು ನಿಮಗೆ ತಿಳಿದಿದೆ. ನಾನು ನನ್ನ ಶಾಲೆಯಾದ ಸೇಂಟ್ ಪೀಟರ್ಸ್‌ಗೆ ನಾಯಕನಾಗಿದ್ದಾಗ ಅವರು ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿಗೆ ನಾಯಕರಾಗಿದ್ದರು ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮಾತನಾಡುವಾಗ ಮಾಹಿತಿ ಹಂಚಿಕೊಂಡರು.
ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ಈ ಸುದ್ದಿ ದುನಿತ್ ವೆಲ್ಲಾಲಗೆ ಸ್ವಲ್ಪ ಸಮಯದ ಹಿಂದೆ ತಿಳಿಯಿತು. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು. ಪ್ರಸ್ತುತ ತಂಡವು ದುಃಖ ಭಾವನೆಯಲ್ಲಿದೆ. ಆದರೆ, ಡ್ರೆಸ್ಸಿಂಗ್ ರೂಮ್ ಎಲ್ಲರನ್ನು ಒಂದುಗೂಡಿಸುತ್ತದೆ ಮತ್ತು ಸೂಪರ್ 4 ಹಂತದಲ್ಲಿ ಮುಂದುವರಿಯಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಆಶಿಸುತ್ತೇವೆ ಎಂದು ಅರ್ನಾಲ್ಡ್ ಹೇಳಿದರು.
ಅಂದಹಾಗೆ, ದುನಿತ್ ಅವರ ತಂದೆ ಸುರಂಗ ಕೂಡ ಕ್ರಿಕೆಟಿಗರಾಗಿದ್ದರು. ಪ್ರಿನ್ಸ್ ಆಫ್ ವೇಲ್ಸ್ ಕಾಲೇಜನ್ನು ಮುನ್ನಡೆಸಿದರು ಆದರೆ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಇನ್ನು ಏಷ್ಯಾಕಪ್‌ನಲ್ಲಿ ಶ್ರೀಲಂಕಾದ ಕೊನೆಯ ಗ್ರೂಪ್ ಬಿ ಪಂದ್ಯದಲ್ಲಿ ವೆಲ್ಲಾಲಗೆ, ಅಫ್ಘಾನಿಸ್ತಾನ ವಿರುದ್ಧದ ಅತ್ಯುತ್ತಮ ಆಟ ಪ್ರದರ್ಶಿಸಲಿಲ್ಲ. ವೆಲ್ಲಾಲಗೆ ಬೌಲರ್ ಆಗಿದ್ದು, 4 ಓವರ್‌ಗಳಲ್ಲಿ 49 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ, ಒಂದೇ ಒಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ 22 ಎಸೆತಗಳಲ್ಲಿ 60 ರನ್‌ಗಳನ್ನು ಗಳಿಸಿದ ಅಫ್ಘಾನಿಸ್ತಾನದ ಅನುಭವಿ ಬೌಲರ್ ಮೊಹಮ್ಮದ್ ನಬಿ ಅವರು ಒಂದೇ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ, ಅಫ್ಘಾನಿಸ್ತಾನದ ಧೈರ್ಯಶಾಲಿ ಪ್ರಯತ್ನಗಳ ಹೊರತಾಗಿಯೂ, ಶ್ರೀಲಂಕಾ ತಂಡವೇ ಮೇಲುಗೈ ಸಾಧಿಸಿ, ಗೆಲುವು ಸಾಧಿಸಿತು. (ಏಜೆನ್ಸೀಸ್)