ಅಮೆರಿಕ ಪೊಲೀಸರ ಗುಂಡೇಟಿಗೆ ಭಾರತದ ಟೆಕ್ಕಿ ಬಲಿ: ಮೃತನ ಲಿಂಕ್​ಡಿನ್​ ಪೋಸ್ಟ್​ನಲ್ಲಿ ಆಘಾತಕಾರಿ ಮಾಹಿತಿ... Indian Techie

Indian Techie
Published on

Indian Techie : ಭಾರತೀಯ ಮೂಲದ ಟೆಕ್ಕಿಯೊಬ್ಬ ಅಮೆರಿಕ ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ತಿಂಗಳ ಆರಂಭದಲ್ಲಿ ತನ್ನ ರೂಮ್​ಮೇಟ್​ಗೆ ಚಾಕು ಇರಿದಿದ್ದ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರೆ, ಇದು ಜನಾಂಗೀಯ ತಾರತಮ್ಯದಿಂದಾಗಿ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಮೃತ ಟೆಕ್ಕಿಯ ಕುಟುಂಬ ಬೇಡಿಕೆ ಇಟ್ಟಿದೆ.

ಮೃತ ಟೆಕ್ಕಿಯನ್ನು ಮೊಹಮ್ಮದ್​ ನಿಜಾಮುದ್ದೀನ್​ (30) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಮೆಹಬೂಬ್​ನಗರದ ನಿವಾಸಿ. ಅಮೆರಿಕದ ಸಾಂತಾ ಕ್ಲಾರಾದಲ್ಲಿರುವ ನೆಲೆಸಿದ್ದನು. ಅಲ್ಲಿನ ನಿವಾಸದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ವೇಳೆ ಆತನ ಕೈಯಲ್ಲಿ ಚಾಕು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆ.3ರಂದು ಈ ಘಟನೆ ನಡೆದಿದ್ದು, ಆತನ ರೂಮ್​ಮೇಟ್​ ಹಲವಾರು ಗಾಯಗಳಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.

ಮನೆಯೊಳಗೆ ಚಾಕು ಇರಿತ ನಡೆದಿರುವ ಕುರಿತು ಸಹಾಯವಾಣಿ ಸಂಖ್ಯೆ 911 ಕ್ಕೆ ಕರೆ ಬಂದಿತು. ನಿಜಾಮುದ್ದೀನ್ ಮತ್ತು ಆತನ ರೂಮ್‌ಮೇಟ್ ನಡುವಿನ ವಾಗ್ವಾದ ಉಲ್ಬಣಗೊಂಡು, ಪರಸ್ಪರ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸಾಂತಾಕ್ಲಾರಾ ಅಧಿಕಾರಿಗಳು (SCPD) ನಿಜಾಮುದ್ದೀನ್​ ಮನೆಗೆ ಆಗಮಿಸಿದರು. ಈ ವೇಳೆ ಆತನ ಕೈಯಲ್ಲಿ ಚಾಕು ಕೂಡ ಇತ್ತು. ಬಳಿಕ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದು, ಗಾಯಗೊಂಡ ನಿಜಾಮುದ್ದೀನ್​ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. ಇನ್ನು ಗಾಯಗೊಂಡಿದ್ದ ಆತನ ರೂಮ್​ಮೇಟ್​ ಅನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಸಾಂತಾ ಕ್ಲಾರಾ ಕೌಂಟಿ ಜಿಲ್ಲಾ ವಕೀಲರ ಕಚೇರಿ ಮತ್ತು ಸಾಂತಾ ಕ್ಲಾರಾ ಪೊಲೀಸ್ ಇಲಾಖೆ ಜಂಟಿ ತನಿಖೆ ನಡೆಸುತ್ತಿವೆ. ಇದು ಸಕ್ರಿಯ ಮತ್ತು ಮುಕ್ತ ತನಿಖೆಯಾಗಿಯೇ ಉಳಿದಿದ್ದು, ತನಿಖೆ ಮುಂದುವರೆದಂತೆ, ನಾಳೆ ಮಧ್ಯಾಹ್ನದ ಹೊತ್ತಿಗೆ ಹೊಸ ಅಪ್​ಡೇಟ್​ ಒದಗಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಿಜಾಮುದ್ದೀನ್ ಕುಟುಂಬ ಹೇಳುವಂತೆ, ಗುಂಡು ಹಾರಿಸುವ ಮೊದಲು ಪೊಲೀಸರ ಸಹಾಯಕ್ಕಾಗಿ ನಿಜಾಮುದ್ದೀನ್​ ಕರೆ ಮಾಡಿದ್ದ ಎಂದಿದ್ದಾರೆ. ನಿಜಾಮುದ್ದೀನ್ ಫ್ಲೋರಿಡಾ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು ಮತ್ತು ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿರುವ ಟೆಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆತನೊಬ್ಬ ಶಾಂತ ಸ್ವಭಾವದ ಮತ್ತು ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದ. ಆತ ಜನಾಂಗೀಯ ಕಿರುಕುಳ, ವೇತನ ವಂಚನೆ ಮತ್ತು ಕೆಲಸದಿಂದ ತಪ್ಪಾಗಿ ವಜಾಗೊಳಿಸಿದ್ದ ಬಗ್ಗೆ ಈ ಹಿಂದೆ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದರು ಆತನ ಕುಟುಂಬ ತಿಳಿಸಿದೆ.

ನಾನು ಜನಾಂಗೀಯ ದ್ವೇಷ, ಜನಾಂಗೀಯ ತಾರತಮ್ಯ, ಜನಾಂಗೀಯ ಕಿರುಕುಳ, ಚಿತ್ರಹಿಂಸೆ, ವೇತನ ವಂಚನೆ, ತಪ್ಪಾದ ವಜಾ ಮತ್ತು ನ್ಯಾಯ ಸಿಗದೇ ಸಂತ್ರಸ್ತನಾಗಿದ್ದೇನೆ ಅಂತ ಬರೆದಿರುವ ಅವರ ಲಿಂಕ್ಡ್‌ಇನ್ ಪೋಸ್ಟ್ ಅನ್ನು ನಿಜಾಮುದ್ದೀನ್​ ಕುಟುಂಬವು ಎತ್ತಿ ತೋರಿಸಿದೆ. ಸಾಕು ಸಾಕು ಬಿಳಿಯರ ಪ್ರಾಬಲ್ಯ. ಬಿಳಿ ಅಮೆರಿಕನ್ ಮನಸ್ಥಿತಿ ಕೊನೆಗೊಳ್ಳಬೇಕು. ಜನಾಂಗೀಯ ತಾರತಮ್ಯ, ಆಹಾರದಲ್ಲಿ ವಿಷಪೂರಿತಗೊಳಿಸುವಿಕೆ, ಹೊರಹಾಕುವಿಕೆ ಮತ್ತು ಪತ್ತೇದಾರಿ ಎಂದು ಹೇಳಲಾದ ವ್ಯಕ್ತಿಯಿಂದ ನಿರಂತರ ಕಣ್ಗಾವಲು ಮತ್ತು ಬೆದರಿಕೆಯ ಆರೋಪಗಳನ್ನು ಸಹಿಸಲಾಗದು ಎಂದು ಲಿಂಕ್​ಡಿನ್​ ಪೋಸ್ಟ್​ನಲ್ಲಿ ನಿಜಾಮುದ್ದೀನ್​ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಅವರ ಸಾವಿಗೆ ಕಾರಣವಾದ ಆರೋಪಗಳು ಮತ್ತು ಸಂದರ್ಭಗಳ ಬಗ್ಗೆ ಕುಟುಂಬವು ಸಮಗ್ರ ತನಿಖೆಯನ್ನು ಆಗ್ರಹಿಸಿದೆ. ಅಲ್ಲದೆ, ಅವರ ಪಾರ್ಥಿವ ಶರೀರವನ್ನು ಸಾಗಿಸಲು ವಿದೇಶಾಂಗ ಸಚಿವಾಲಯದ (MEA) ಸಹಾಯವನ್ನೂ ಕೋರಿದೆ. ಸದ್ಯ ನಿಜಾಮುದ್ದೀನ್​ ಶವ ಸಾಂತಾ ಕ್ಲಾರಾದ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಇದರ ನಡುವೆ ನಿಜಾಮುದ್ದೀನ್ ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಅವರನ್ನು ಭೇಟಿಯಾದ ಮಜ್ಲಿಸ್ ಬಚಾವೋ ತೆಹ್ರೀಕ್ ವಕ್ತಾರ ಅಮ್ಜೇದ್ ಉಲ್ಲಾ ಖಾನ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಜನರಲ್ ಅವರನ್ನು ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ಒದಗಿಸುವಂತೆ ಮತ್ತು ಶವವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net