ಕ್ರೀಡೆ ಬುದ್ದಿವಂತಿಕೆಯನ್ನು ಬಲಪಡಿಸುತ್ತದೆ: ಬೆಂಗಳೂರು ವಿವಿ ಕುಲ ಸಚಿವ ಶೇಕ್ ಲತೀಫ್

BU
Published on

ಬೆಂಗಳೂರು: ಕ್ರೀಡೆಯಿಂದ ಭಾವನೆಗಳನ್ನು ಹತೋಟಿಯಲ್ಲಿಡಲು ಮತ್ತು ಬುದ್ಧಿವಂತಿಕೆಯನ್ನು ಬಲಪಡಿಸಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಶೇಕ್ ಲತೀಫ್ ಹೇಳಿದ್ದಾರೆ

ಬೆಂಗಳೂರು ವಿಶ್ವವಿದ್ಯಾನಿಲಯ, ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸ್ (ಎಸ್.ಐ.ಎಸ್.ಎಸ್) ಸಹಯೋಗದೊಂದಿಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸಾಫ್ಟ್‌ಬಾಲ್ ಪುರುಷರ ಚಾಂಪಿಯನ್‌ಶಿಪ್ - 2023-24 ನಲ್ಲಿ ಭಾರತದಾದ್ಯಂತ 90 ವಿಶ್ವವಿದ್ಯಾಲಯದ ತಂಡಗಳು ಮತ್ತು 1600ಕ್ಕೂ ಅಧಿಕ ಆಟಗಾರರು ಮೆಗಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಿಜಿಸ್ಟ್ರಾರ್ ಶೇಕ್ ಲತೀಫ್, ಕ್ರೀಡೆಗಳು ಶಿಸ್ತಿಗೆ ಮತ್ತೊಂದು ಹೆಸರಾಗಿದ್ದು, ಕ್ರೀಡೆಗೆ ಸಮಾನಾರ್ಥಕ ಪದವೂ ಆಗಿದೆ. ಇದು ಜೀವನದ ಪ್ರತಿಯೊಂದು ಹಂತದಲ್ಲೂ ಸುಸಂಸ್ಕೃತಿ, ವರ್ತನೆಯಲ್ಲಿ ಸಕಾರಾತ್ಮಕತೆ ಮತ್ತು ನಿಖರತೆಯ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುತ್ತದೆ. ಆಡುವಾಗ ಫಲಿತಾಂಶಗಳ ಬಗ್ಗೆ ಚಿಂತಿಸಬೇಡಿ. ಕ್ರೀಡಾ ಬದ್ಧತೆಯ ಮೇಲೆ ಹೆಚ್ಚು ಗಮನಹರಿಸಿ ಎಂದು ಕಿವಿ ಮಾತು ಹೇಳಿದರು.

ಸೌಂದರ್ಯ ಎಜುಕೇಷನಲ್ ಟ್ರಸ್ಟ್ ನ ಸಿಇಓ ಕೀರ್ತನ್ ಕುಮಾರ್ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಕ್ರೀಡೆ ಭಾವನಾತ್ಮಕ ಬುದ್ದಿಶಕ್ತಿಯನ್ನು ಗಟ್ಟಿಗೊಳಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಸಂಸ್ಕೃತಿಯನ್ನು ಬೆಳೆಸುವುದು ಇಂದಿನ ಜೀವನದ ಅಗತ್ಯವಾಗಿದೆ. ಮೌಲ್ಯಗಳು ಮತ್ತು ಮನೋಭಾವನೆಯೊಂದಿಗೆ ಕ್ರೀಡೆ ಬೆಸೆದುಕೊಂಡಿದೆ. ಕ್ರೀಡೆ ಮೂಲಕ ಯಶಸ್ಸಿನ ಹಾದಿಯನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಪ್ರಾಂಶುಪಾಲರಾದ ಡಾ.ವಾಸು ಬಿ ಎ, ಕ್ರೀಡೆ ವ್ಯಕ್ತಿಯ ಸಹಜ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ. ಉನ್ನತ ಪ್ರಗತಿಗೆ ಪ್ರೇರಣೆ ನೀಡುತ್ತದೆ ಎಂದರು. ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ಸಿ.ಕೃಷ್ಣಸ್ವಾಮಿ, ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಸೈನ್ಸ್‌ನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಹರೀಶ್ ಪಿ ಎಂ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net