ಖೇಲೋ ಇಂಡಿಯಾ ಗೇಮ್ಸ್‌ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ

mallakamba web
Published on

ನವದೆಹಲಿ: ಮಲ್ಲಕಂಬ ಮತ್ತು ಕೇರಳ ಮೂಲದ ಯುದ್ಧಕಲೆ ಕಲಾರಿಪಯಟ್ಟು ಸಹಿತ 4 ದೇಸಿ ಕ್ರೀಡೆಗಳನ್ನು ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಸೇರ್ಪಡೆಗೊಳಿಸಲು ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಒಪ್ಪಿಗೆ ನೀಡಿದೆ. ಪಂಜಾಬಿ ಸಿಖ್ ಯುದ್ಧಕಲೆ ‘ಗತಕಾ’ ಮತ್ತು ಮಣಿಪುರದ ಯುದ್ಧಕಲೆ ‘ತಂಗ್-ಟಾ’ ಖೇಲ್ ಇಂಡಿಯಾ ಗೇಮ್ಸ್‌ಗೆ ಸೇರ್ಪಡೆಗೊಂಡಿರುವ ಮತ್ತೆರಡು ಹೊಸ ಕ್ರೀಡೆಗಳಾಗಿವೆ.

ಯೋಗ ಮತ್ತು ಜಿಮ್ನಾಸ್ಟಿಕ್ಸ್ ಆಸನಗಳ ಜತೆಗೆ ಕುಸ್ತಿಯ ಪಟ್ಟುಗಳನ್ನು ಒಳಗೊಂಡ ಭಾರತದ ಸಾಂಪ್ರದಾಯಿಕ ಕ್ರೀಡೆ ಮಲ್ಲಕಂಬ ಸಹಿತ ನಾಲ್ಕು ದೇಸಿ ಕ್ರೀಡೆಗಳು ದೇಶದ ಶ್ರೀಮಂತ ಸಂಸ್ಕೃತಿಯ ಭಾಗವಾಗಿವೆ. ಈ ಕ್ರೀಡೆಗಳನ್ನು ರಕ್ಷಿಸುವುದು, ಪ್ರೋತ್ಸಾಹಿಸುವುದು ಮತ್ತು ಜನಪ್ರಿಯಗೊಳಿಸುವುದು ಕ್ರೀಡಾ ಸಚಿವಾಲಯದ ಜವಾಬ್ದಾರಿಯಾಗಿದೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಈ ದೇಸಿ ಕ್ರೀಡೆಗಳ ಕ್ರೀಡಾಪಟುಗಳ ಸ್ಪರ್ಧೆಗೆ ಖೇಲೋ ಇಂಡಿಯಾ ಗೇಮ್ಸ್‌ಗಿಂತ ಉತ್ತಮವಾದ ವೇದಿಕೆ ಬೇರೆ ಇಲ್ಲ. ಯೋಗಾಸನದ ಜತೆಗೆ ಈ ನಾಲ್ಕು ದೇಸಿ ಕ್ರೀಡೆಗಳು 2021ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಯಶಸ್ಸು ಕಾಣುವ ಮತ್ತು ದೇಶದ ಯುವ ಜನತೆಯ ಗಮನಸೆಳೆಯುವ ವಿಶ್ವಾಸ ನನಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದೇಸಿ ಕ್ರೀಡೆಗಳು ಖೇಲೋ ಇಂಡಿಯಾಗೆ ಸೇರ್ಪಡೆಗೊಳ್ಳಲಿವೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.

ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಲಭಿಸುವುದರೊಂದಿಗೆ ಖೇಲೋ ಇಂಡಿಯಾಗೂ ಸೇರ್ಪಡೆಗೊಂಡಿದ್ದರೆ, ಈ ನಾಲ್ಕು ದೇಸಿ ಕ್ರೀಡೆಗಳು ದೇಶದ ವಿವಿಧ ಭಾಗಗಳಿಗೆ ಸೇರಿದ್ದಾಗಿವೆ ಎಂಬುದು ವಿಶೇಷವಾಗಿದೆ. ಯೋಗಾಸನದಂತೆ ಮಲ್ಲಕಂಬ ಕೂಡ ದೇಶದೆಲ್ಲೆಡೆ ಚಿರಪರಿಚಿತವಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಮನ್ನಣೆಯನ್ನು ಪಡೆದಿದೆ. 2021ರ ಖೇಲೋ ಇಂಡಿಯಾ ಯೂತ್ ಗೇಮ್ಸ್ ಹರಿಯಾಣದಲ್ಲಿ ನಿಗದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net