

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಬಹುಮಾನ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದೆ. ಈ ಕುರಿತು ಶನಿವಾರ ನಡೆದ ವರ್ಚುವಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರೀಡಾ ಸಚಿವ ಕಿರಣ್ ರಿಜಿಜು ಅಧಿಕೃತವಾಗಿ ಪ್ರಕಟಿಸಿದರು. 7 ಪ್ರಶಸ್ತಿಗಳ ಪೈಕಿ 4 ಪ್ರಶಸ್ತಿಗಳಿಗಷ್ಟೇ ಬಹುಮಾನ ಮೊತ್ತ ಪರಿಷ್ಕರಿಸಲಾಗಿದೆ. 2008ರ ಬಳಿಕ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಬಹುಮಾನ ಮೊತ್ತವನ್ನು ಪರಿಷ್ಕರಿಸಲಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಪ್ರಶಸ್ತಿ ಮೊತ್ತ ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್‌ರತ್ನ ಪ್ರಶಸ್ತಿ ಮೊತ್ತವನ್ನು 7.5 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಗೆ, ಅರ್ಜುನ ಪ್ರಶಸ್ತಿ ಮೊತ್ತವನ್ನು 5 ಲಕ್ಷರಿಂದ 15 ಲಕ್ಷ ರೂಪಾಯಿಗೆ ಏರಿಸಲಾಗಿದೆ. ದ್ರೋಣಾಚಾರ್ಯ (ಜೀವಮಾನ ಸಾಧನೆ) ಪ್ರಶಸ್ತಿ ಮೊತ್ತವನ್ನು 5 ಲಕ್ಷದಿಂದ 15 ಲಕ್ಷ ರೂಪಾಯಿಗೆ, ದ್ರೋಣಾಚಾರ್ಯ ಸಾಮಾನ್ಯ ವಿಭಾಗದ ಪ್ರಶಸ್ತಿ ಮೊತ್ತವನ್ನು 5 ರಿಂದ 10 ಲಕ್ಷ ರೂಪಾಯಿಗೆ ಹಾಗೂ ಧ್ಯಾನ್‌ಚಂದ್ ಪ್ರಶಸ್ತಿ ಮೊತ್ತವನ್ನು 5 ರಿಂದ 10 ಲಕ್ಷಕ್ಕೆ ಏರಿಸಲಾಗಿದೆ.
ವಿವಿಧ ಸಾಯ್ ಕೇಂದ್ರಗಳಲ್ಲಿ ವರ್ಚುಲ್ ಮೂಲಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖೇಲ್‌ರತ್ನ ಪ್ರಶಸ್ತಿ ಪುರಸ್ಕೃತರಾದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮ ಹಾಗೂ ಕೋವಿಡ್-19 ಸೋಂಕಿಗೆ ಒಳಗಾಗಿರುವ ಕುಸ್ತಿಪಟು ವಿನೇಶ್ ಪೋಗಟ್ ಸಮಾರಂಭಕ್ಕೆ ಗೈರಾದರು. ಒಟ್ಟು 74 ಮಂದಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರೂ 60 ಮಂದಿ 11 ಸಾಯ್ ಕೇಂದ್ರಗಳಲ್ಲಿ ಹಾಜರಿದ್ದು, ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಶಸ್ತಿ ಸ್ವೀಕರಿಸಿದರು.