

ಬೆಂಗಳೂರು: ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಎರಡು ದಿನಗಳ ಹಿಂದಷ್ಟೇ ಅಪ್ಪ-ಅಮ್ಮನಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ಜೋಡಿಗೆ ಕ್ರಿಕೆಟ್ ವಲಯ ಅಲ್ಲದೆ, ಇತರ ಕ್ರೀಡೆಯ ಹಾಗೂ ಬಾಲಿವುಡ್ ಮಂದಿಯೂ ಶುಭಕೋರಿದ್ದರು. ಐಪಿಎಲ್ ಆಡಲು ಯುಎಇಗೆ ತೆರಳಿರುವ ವಿರಾಟ್ ಕೊಹ್ಲಿ, ತಂಡದೊಂದಿಗೆ ಈ ಸಂಭ್ರಮ ಹಂಚಿಕೊಂಡಿದ್ದಾರೆ. ಕೊಹ್ಲಿ-ಅನುಷ್ಕಾ ಜೋಡಿ ತಂಡದ ಸದಸ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಈ ವಿಡಿಯೋವನ್ನು ಆರ್ಸಿಬಿ ತನ್ನ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ.
2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಅನುಷ್ಕಾ ಶರ್ಮ ಹಾಗೂ ವಿರಾಟ್ ಕೊಹ್ಲಿ ಜೋಡಿ ಸಿಹಿ ಸುದ್ದಿ ಪ್ರಕಟಿಸಿತ್ತು. ಈ ಸಂಭ್ರಮವನ್ನು ವಿರಾಟ್-ಅನುಷ್ಕಾ ಜೋಡಿ ದುಬೈನಲ್ಲಿ ಆಚರಿಸಿಕೊಂಡಿದೆ. ಪರಸ್ಪರ ಮುತ್ತುಕೊಡುವ ಮೂಲಕ ಅಭಿನಂದಿಸಿಕೊಂಡಿದೆ. ಇವರಲ್ಲದೆ, ತಂಡದ ಮತ್ತೋರ್ವ ಸದಸ್ಯ ಯಜುವೇಂದ್ರ ಚಾಹಲ್ ಕೂಡ ಧನಶ್ರೀ ವರ್ಮ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಚಾಕೋಲೇಟ್ ಕತ್ತರಿಸಿ ಸಂಭ್ರಮಿಸಿದರು.2ನಿಮಿಷ 33 ಸೆಕೆಂಡ್ ಗಳ ವಿಡಿಯೋ ಪ್ರಕಟಿಸಲಾಗಿದೆ.
ವಿರಾಟ್ ಕೊಹ್ಲಿ ಗುರುವಾರವಷ್ಟೇ ಅನುಷ್ಕಾ ಗರ್ಭಿಣಿಯಾಗಿರುವ ವಿಷಯವನ್ನು ಪ್ರಕಟಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಜೋಡಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಕೊಹ್ಲಿ ಜತೆಯಲ್ಲಿಯೇ ಅನುಷ್ಕಾ ಕೂಡ ದುಬೈಗೆ ತೆರಳಿದ್ದಾರೆ. ಸೆ.19 ರಿಂದ ನ.10ರವರೆಗೆ ಐಪಿಎಲ್ ನಡೆಯಲಿದ್ದು, 6 ದಿನಗಳ ಕ್ವಾರಂಟೈನ್ ಮುಗಿಸಿರುವ ಆರ್ಸಿಬಿ ಶುಕ್ರವಾರದಿಂದ ಅಭ್ಯಾಸ ಆರಂಭಿಸಿದೆ.