VIDEO: ಐದು ತಿಂಗಳ ಬಳಿಕ ವಿರಾಟ್ ಕೊಹ್ಲಿ ನೆಟ್ಸ್ ಅಭ್ಯಾಸ..

virat kohli and rcb practice
Published on

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ-ನಾಯಕ ರೋಹಿತ್ ಶರ್ಮ ಸೇರಿದಂತೆ ಭಾರತೀಯ ಆಟಗಾರರು 5 ತಿಂಗಳ ಬಳಿಕ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಆರ್‌ಸಿಬಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಮುಂಬರುವ ಐಪಿಎಲ್‌ಗೆ ಸಿದ್ಧತೆ ಆರಂಭಿಸಿದರು. ಯುಎಇ ತಲುಪಿದ ಬಳಿಕ 6 ದಿನಗಳ ಕಾಲ ಕ್ವಾರಂಟೈನ್ ಮುಗಿಸಿದ ತಂಡಗಳು ಅಭ್ಯಾಸ ಆರಂಭಿಸಿವೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆ.19 ರಿಂದ ನ.10ರವರೆಗೆ ನಡೆಯಲಿದೆ.

ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈನಲ್ಲಿ ಅಭ್ಯಾಸ ಆರಂಭಿಸಿದರೆ, ಮುಂಬೈ ಇಂಡಿಯನ್ಸ್ ತಂಡ ಅಬುಧಾಬಿಯಲ್ಲಿ ಶನಿವಾರದಿಂದ ಅಭ್ಯಾಸ ಆರಂಭಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಶನಿವಾರ ಸಂಜೆ ವೇಳೆಗೆ ಅಭ್ಯಾಸಕ್ಕಿಳಿಯಿತು. ಡೆಲ್ಲಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಆಗಸ್ಟ್ 23 ರಂದು ಯುಎಇಗೆ ಆಗಮಿಸಿದ್ದವು. ಕ್ವಾರಂಟೈನ್ ಮುಕ್ತಾಯದ ಬಳಿಕ ತಂಡಗಳಿಗೆ ಅಭ್ಯಾಸ ಮಾಡಲು ಅನುಮತಿ ನೀಡಲಾಯಿತು. ಹಲವು ದಿನಗಳ ಬಳಿಕ ಕೊಹ್ಲಿ ನೆಟ್ಸ್‌ಗೆ ಇಳಿದರೂ ಉತ್ತಮ ಹೊಡೆತಗಳ ಮೂಲಕ ಗಮನಸೆಳೆದರು. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್, ಆರ್‌ಸಿಬಿ ತಂಡದ ನಿರ್ದೇಶಕ ಮೈಕ್ ಹಸ್ಸೆನ್ ಮಾರ್ಗದರ್ಶನದಲ್ಲಿ ತಂಡದ ಅಭ್ಯಾಸ ನಡೆಯಿತು.

5 ತಿಂಗಳ ಬಳಿಕ ಮೈದಾನಕ್ಕಿಳಿದೆ. 6 ದಿನಗಳ ಹಿಂದಷ್ಟೇ ಆಡಿದಂತಿದೆ. ಹುಡುಗರೊಂದಿಗೆ ಆಡಿದ ಮೊದಲ ಅವಧಿ ಉತ್ತಮವಾಗಿತ್ತು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ರೋಹಿತ್ ಶರ್ಮ ಸಾರಥ್ಯದ ಮುಂಬೈ ಅಬುಧಾಬಿಯಲ್ಲಿ ಉಳಿದುಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡ ದುಬೈನಲ್ಲಿರುವ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಸ್ಥಳೀಯ ಸರ್ಕಾರ ಕೋವಿಡ್-19 ನಿಯಮದಂತೆ ತಂಡಗಳು ಅಭ್ಯಾಸ ನಡೆಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net