

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರ ನಡೆದಿರುವುದಾಗಿ ಸಿಎಸ್ಕೆ ತಂಡ ಶನಿವಾರ ಮಾಹಿತಿ ಖಚಿತಪಡಿಸಿದೆ.
ಈ ಬಗ್ಗೆ ಸಿಎಸ್ಕೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೆ ನೀಡಿರುವ ತಂಡದ ಸಿಇಒ ಕಾಸಿ ವಿಶ್ವನಾಥನ್, ಸುರೇಶ್ ರೈನಾ ಅವರು ಕೆಲ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಮರಳಿ ಬರುತ್ತಿದ್ದು, ಪ್ರಸ್ತುತ ಐಪಿಎಲ್ಗೆ ಅಲಭ್ಯರಾಗಲಿದ್ದಾರೆ. ಈ ಸಂದರ್ಭದಲ್ಲಿ ರೈನಾರಿಗೆ ಮತ್ತು ಕುಟುಂಬಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.
ರೈನಾ ಅವರು ಆಗಸ್ಟ್ 15ರಂದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಕರೊನಾ ಕಾರಣ ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗಾಗಿ ಆಗಸ್ಟ್ 21ರಂದು ದುಬೈಗೆ ಹಾರಿದ್ದರು. ಬಿಸಿಸಿಐ ನಿಯಮದಂತೆ ಕ್ವಾರಂಟೈನ್ನಲ್ಲಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಹೊರ ನಡೆದಿದ್ದಾರೆ. (ಏಜೆನ್ಸೀಸ್)