

ನವದೆಹಲಿ: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಆರೋಗ್ಯ ಸುಧಾರಣೆಗೆ ಕ್ರೀಡಾ ವಲಯದ ದಿಗ್ಗಜರು ಶುಭ ಹಾರೈಸಿದ್ದಾರೆ. ಕೋವಿಡ್&19ರ ಸೋಂಕಿಗೆ ಒಳಗಾಗಿರುವ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಶನಿವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೊನಾ ವೈರಸ್ ಸೋಂಕು ತಲುಗಿದೆ ಎಂದು ಸ್ವತಃ ಅಮಿತಾಭ್ ಬಚ್ಚನ್ ಶನಿವಾರ ಟ್ವಿಟರ್ ಮೂಲಕ ಖಾತ್ರಿಪಡಿಸಿದ್ದರು. ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್, ಸ್ಪಿನ್ನರ್ ಹರ್ಭಜನ್ ಸಿಂಗ್, ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ವತಿಯಿಂದ ಟ್ವೀಟ್ ಮೂಲಕ ಬಿಗ್ ಬಿ ಆರೋಗ್ಯ ಸುಧಾರಣೆಗೆ ಶುಭಕೋರಲಾಗಿದೆ. ಅಲ್ಲದೆ, ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಕೂಡ ಬಿಗಿ ಚೇತರಿಕೆಗೆ ಹಾರೈಸಿದ್ದಾರೆ.
ಟೇಕ್ ಕೇರ್ ಅಮಿತ್ಜೀ. ಆದಷ್ಟು ಬೇಗ ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಸಚಿನ್ ತೆಂಡುಲ್ಕರ್ ಶುಭಕೋರಿದ್ದಾರೆ. ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆಟ್ ವೆಲ್ ಸೂನ್ ಸರ್ ಎಂದು ಟ್ವೀಟ್ ಮಾಡಿದ್ದರೆ, ಮಾಜಿ ವೇಗದ ಬೌಲರ್ ಆರ್ಪಿ ಸಿಂಗ್, ಅಮಿತಾಮ್, ಅಭಿಷೇಕ್ ಬಚ್ಚನ್, ಚೇತನ್ ಚೌಹಾನ್ ಅವರುಗಳ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಹೇಳಿದ್ದಾರೆ. ಯುವ ಅಥ್ಲೀಟ್ ಹಿಮಾ ದಾಸ್, ಕ್ರಿಕೆಟಿಗ ಮೊಹಮದ್ ಶಮಿ, ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಸೇರಿದಂತೆ ಹಲವು ಮಂದಿ ಬಿಗ್ ಬಿ ಹಾಗೂ ಅಭಿಷೇಕ್ ಚೇತರಿಕೆಗೆ ಶುಭಕೋರಿದ್ದಾರೆ.
ಇದನ್ನೂ ಓದಿ: PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
ನನಗೆ ಕೋವಿಡ್-19 ಪಾಸಿಟಿವ್ ಖಾತ್ರಿಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ, ಕುಟುಂಬದ ಇತರ ಸದಸ್ಯರು ಪರೀಕ್ಷೆಗೆ ಒಳಗಾಗಿದ್ದಾರೆ ಎಂದು 77 ವರ್ಷದ ಬಿಗ್ ಬಿ ಟ್ವೀಟ್ ಮಾಡಿದ್ದರು. ಇವರಲ್ಲಿ ಅಭಿಷೇಕ್ ಬಚ್ಚನ್ ವರದಿ ಕೂಡ ಪಾಸಿಟಿವ್ ಬಂದಿದ್ದು, ಬಿಗ್ ಬಿ ಪತ್ನಿ ಜಯಾ ಬಚ್ಚನ್, ಅಭಿಷೇಕ್ ಪತ್ನಿ ಐಶ್ಚರ್ಯ ರೈ ಬಚ್ಚನ್ ವರದಿ ನೆಗೆಟಿವ್ ಬಂದಿತ್ತು.