VIDEO: 1996ರ ವಿಶ್ವಕಪ್​ ​ ಪಂದ್ಯದಲ್ಲಿ ಆಮೀರ್ ಸೊಹೈಲ್​ ವರ್ತನೆ ಅಚ್ಚರಿ ತಂದಿತ್ತು ಎಂದ ವಾಕರ್​ ಯೂನಿಸ್​

Aamir-Sohail-Venkatesh-Prasad for web
Published on

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೇ ಹಾಗೆ ಹೈವೋಲ್ಟೆಜ್​ನಿಂದ ಕೂಡಿರುತ್ತವೆ. ಕ್ರಿಕೆಟ್​ ಹುಟ್ಟುವಿನಿಂದ ಹಿಡಿದು ಇಂದಿನವರೆಗೂ ಇಂಡೋ-ಪಾಕ್​ ಕದನ ರೋಚಕತೆ ಕಾಯ್ದುಕೊಂಡಿದೆ. ಅದರಲ್ಲೂ ವಿಶ್ವಕಪ್​ ಕದನಗಳ ಬಗ್ಗೆಯಂತೂ ಹೇಳತೀರದು, 1992ರಿಂದಲೂ ಭಾರತವೇ ಪಾಕ್​ ವಿರುದ್ಧ ಅಜೇಯ ಸಾಧನೆ ಮಾಡಿದೆ. ಇದೇ 1996ರ ಕದನ ಕ್ರಿಕೆಟ್​ ಪ್ರಿಯರ ಮನದಲ್ಲಿ ಇನ್ನು ಹಚ್ಚಹಸಿರಾಗಿದೆ. ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್​ಫೈನಲ್​ ಕದನದಲ್ಲಿ ಕನ್ನಡಿಗ ವೆಂಕಟೇಶ್​ ಪ್ರಸಾದ್​ ಹಾಗು ಪಾಕ್​ನ ಆಮೀರ್​ ಸೊಹೈಲ್​ ನಡುವಿನ ಕದನವೇ ರೋಚಕವಾಗಿತ್ತು. ಅಂದಿನ ಆಮೀರ್​ ಸೊಹೈಲ್​ ವರ್ತನೆ ಬಗ್ಗೆ ಅಂದಿನ ಸಹಪಾಠಿ ಆಗಿದ್ದ ವಾಕರ್​ ಯೂನಿಸ್​ ಅಚ್ಚರಿಕೆ ಬಗ್ಗೆ ಮೆಲುಕುಹಾಕಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 288 ರನ್​ ಟಾರ್ಗೆಟ್​ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಕೇವಲ 45 ಎಸೆತದಲ್ಲಿ 51 ರನ್​ ಸಿಡಿಸಿದ್ದ ಆಮೀರ್​ ಸೊಹೈಲ್​ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಆದರೆ, ವೆಂಕಟೇಶ್​ ಪ್ರಸಾದ್​ ಎಸೆತವನ್ನು ಬೌಂಡರಿಗಟ್ಟಿದ ಸೊಹೈಲ್​, ಚೆಂಡು ತೋರಿಸಿ ಅಣಕಿಸಿದ್ದರು. ಮರು ಎಸೆತದಲ್ಲಿಯೇ ಪ್ರಸಾದ್​ ಅವರನ್ನು ಬೌಲ್ಡ್​ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಈ ಸನ್ನಿವೇಶ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಸದ್ದುಮಾಡಿತ್ತು. ಅಂದು ಮೈದಾನದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿರುವ ವಾಕರ್​ ಯೂನಿಸ್​, ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಆಮೀರ್​ ಅವರ ವರ್ತನೆ ನನಗೆ ನಂಬಲು ಸಾಧ್ಯವಾಗಲಿಲ್ಲ. ಆಮೀರ್​ ವರ್ತನೆಯಿಂದಾಗಿ ಉತ್ತಮ ಸ್ಥಿತಿಯಲ್ಲಿದ್ದರೂ ಪಂದ್ಯ ಸೋತೆವು ಎಂದು ಪಂದ್ಯದ ಕುರಿತು ವಾಕರ್​ ಹೇಳಿಕೊಂಡಿದ್ದಾರೆ. ಅಂದಿನ ಪಂದ್ಯಕ್ಕೆ ಆಮೀರ್​ ಪಾಕ್​ ತಂಡದ ನಾಯಕತ್ವವಹಿಸಿದ್ದರು.

ಮೊದಲು ಬ್ಯಾಟಿಂಗ್​ ಮಾಡಿದ ಭಾರತ ನವಜೋತ್​ ಸಿಂಗ್​ ಸಿಂಧು (93ರನ್​, 115 ಎಸೆತ, 11 ಬೌಂಡರಿ) ಹಾಗೂ ಅಜಯ್​ ಜಡೇಜಾ (45 ರನ್​, 25 ಎಸೆತ, 4 ಬೌಂಡರಿ, 2 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಭಾರತ 8 ವಿಕೆಟ್​ಗೆ 287 ರನ್​ಗಳಿಸಿದರೆ, ಪ್ರತಿಯಾಗಿ ಪಾಕಿಸ್ತಾನ ನಾಯಕ ಆಮೀರ್​ ಸೊಹೈಲ್​ (55ರನ್​, 46 ಎಸೆತ, 9 ಬೌಂಡರಿ, 1 ಸಿಕ್ಸರ್​) ಹಾಗೂ ಸಯೀದ್​ ಅನ್ವರ್​ (48ರನ್​, 32 ಎಸೆತ, 5 ಬೌಂಡರಿ, 2 ಸಿಕ್ಸರ್​) ಜೋಡಿ ಬಿರುಸಿನ ಬ್ಯಾಟಿಂಗ್​ ನಡುವೆಯೂ ಕನ್ನಡಿಗರಾದ ವೆಂಕಟೇಶ್​ ಪ್ರಸಾದ್​ (45ಕ್ಕೆ 3) ಹಾಗೂ ಅನಿಲ್​ ಕುಂಬ್ಳೆ (48ಕ್ಕೆ 3) ಜೋಡಿ ಮಾರಕ ದಾಳಿಗೆ ನಲುಗಿ 49 ಓವರ್​ಗಳಲ್ಲಿ 9 ವಿಕೆಟ್​ಗೆ 248 ರನ್​ ಗಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net