ರಾಜ್ಯದಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ

KANTEERAVA WORK
Published on

ರಘುನಾಥ್ ಡಿ.ಪಿ.

ಬೆಂಗಳೂರು: ಕಳೆದ 60 ದಿನಗಳಿಂದಲೂ ರದ್ದು, ಸ್ಥಗಿತ, ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ, ಸದ್ಯಕ್ಕಿಲ್ಲ ಕ್ರೀಡಾ ಚಟುವಟಿಕೆ ಎಂಬ ಮಾತುಗಳದ್ದೇ ಕಾರುಬಾರು ಇತ್ತು. ಲಾಕ್​ಡೌನ್ 4.0 ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕೆಲವೊಂದು ಕ್ರೀಡೆಗಳ ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ. ಎರಡು ತಿಂಗಳಿಂದ ಫಿಟ್ನೆಸ್, ಆನ್​ಲೈನ್ ತರಬೇತಿಯಲ್ಲೇ ಮುಳುಗಿದ್ದ ಕ್ರೀಡಾಪಟುಗಳು, ಕರ್ನಾಟಕದ ಕ್ರೀಡಾ ಸಚಿವರ ಅನುಮತಿ ದೊರೆತ ಬೆನ್ನಲ್ಲೇ ಅಭ್ಯಾಸ ಆರಂಭಿಸಲು ಮುಂದಾಗಿದ್ದಾರೆ. ಆದರೆ ಕೆಲ ಕ್ರೀಡೆಗಳಿಗೆ ಕ್ರೀಡಾಂಗಣಗಳು ಲಭ್ಯವಿಲ್ಲದೆ ಪರದಾಡುವಂತಾಗಿದೆ. ರಾಜ್ಯದಲ್ಲಿ ಕ್ರೀಡೆಗಳ ಹಾಲಿ ಸ್ಥಿತಿಗತಿಯ ಸಂಕ್ಷಿಪ್ತ ವಿವರ ಇಲ್ಲಿದೆ.

ಅಥ್ಲೀಟ್​ಗಳಿಗಿಲ್ಲ ಅವಕಾಶ ಭಾಗ್ಯ: ಎಲೈಟ್ ಅಥ್ಲೀಟ್​ಗಳ ಅಭ್ಯಾಸಕ್ಕೆ ಸರ್ಕಾರವೇ ಅನುಮತಿ ನೀಡಿದ್ದರೂ ಅಥ್ಲೀಟ್​ಗಳಿಗೆ ಆ ಭಾಗ್ಯ ಒಲಿದಿಲ್ಲ. ಮೈದಾನದ ಕೊರತೆಯೇ ಇದಕ್ಕೆ ಕಾರಣ. ಕಂಠೀರವ ಸ್ಟೇಡಿಯಂಗೆ ನೂತನ ಸಿಂಥೆಟಿಕ್ ಅಳವಡಿಕೆಗಾಗಿ ಟ್ರಾ್ಯಕ್ ಕೆತ್ತಲಾಗಿದೆ. ಜತೆಗೆ ಸ್ಟೇಡಿಯಂ ಆವರಣದಲ್ಲಿರುವ ಕ್ರೀಡಾ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರವಾಗಿರುವುದರಿಂದ 200 ಮೀಟರ್ ಟ್ರಾ್ಯಕ್​ನಲ್ಲೂ ತರಬೇತಿ ಆರಂಭಿಸಲು ಅನುಮತಿ ನಿರಾಕರಿಸಲಾಗಿದೆ. ಜತೆಗೆ ಬಾಣಸಿಗ ಸಾವನ್ನಪ್ಪಿದ ಕಾರಣ ಭಾರತೀಯ ಕ್ರೀಡಾ ಪ್ರಾಧಿಕಾರವೂ (ಸಾಯ್) ಲಾಕ್ ಆಗಿರುವುದರಿಂದ ಅಲ್ಲಿಯೂ ತರಬೇತಿ ಪಡೆಯದಂತಾಗಿದೆ. ಖಾಸಗಿ ಮೈದಾನ, ಪಾರ್ಕ್​ಗಳೇ ಅಥ್ಲೀಟ್​ಗಳ ಅಭ್ಯಾಸಕ್ಕೆ ಆಶ್ರಯವಾಗಿವೆ.

ಬ್ಯಾಡ್ಮಿಂಟನ್ ಅಭ್ಯಾಸಕ್ಕಿಲ್ಲ ಅಡಚಣೆ: ಬೆಂಗಳೂರು ಹೊರವಲಯದಲ್ಲಿರುವ ಪಡುಕೋಣೆ-ದ್ರಾವಿಡ್ ಕ್ರೀಡಾ ಕ್ರೇಂದ್ರದಲ್ಲಿ ಬ್ಯಾಡ್ಮಿಂಟನ್ ತರಬೇತಿ ಆರಂಭಗೊಂಡಿದೆ. ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್, ಮಿಥುನ್ ಮಂಜುನಾಥ್, ಚಿರಾಗ್ ಸೇನ್ ಸಹಿತ 15 ಎಲೈಟ್ ಷಟ್ಲರ್​ಗಳು ವಿಮಲ್​ಕುಮಾರ್ ಮಾರ್ಗದರ್ಶನ ದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ತಲಾ 7 ಮಂದಿಯಂತೆ ಎರಡು ಬ್ಯಾಚ್​ಗಳಲ್ಲಿ ವಿಂಗಡಿಸಿ ತರಬೇತಿ ನೀಡಲಾಗುತ್ತಿದೆ. ಫಿಸಿಯೋ, ಟ್ರೇನರ್​ಗಳು ಎಂದಿನಂತೆ ಸಲಹೆ ನೀಡುತ್ತಿದ್ದಾರೆ. ‘ಕೋರ್ಟ್ ಬುಕ್ಕಿಂಗ್ ಆರಂಭಿಸಲಾಗಿದ್ದು, ಸೋಮವಾರದಿಂದ ತರಬೇತಿ ಆರಂಭಿಸಲಾಗು ವುದು, ಸರ್ಕಾರದ ನಿಯಮದಂತೆ ತರಬೇತಿ ನೀಡಲಾಗುವುದು. ಸೀನಿಯರ್ ಮಟ್ಟದ ಆಟಗಾರರನ್ನು ಮಾತ್ರ ತರಬೇತಿಗೆ ಆಹ್ವಾನಿಸಿದ್ದು, ಶಾಲಾ ಮಕ್ಕಳಿಗೆ ಸದ್ಯಕ್ಕೆ ಅವಕಾಶ ಇಲ್ಲ’ ಎನ್ನುತ್ತಾರೆ ಲೆವೆಲ್ ಅಪ್ ಬ್ಯಾಡ್ಮಿಂಟನ್ ಅಕಾಡೆಮಿಯ ಅರವಿಂದ್ ಭಟ್.

ಕೆಬಿಎಗಿಲ್ಲ ಮಾಹಿತಿ: ಕ್ರೀಡಾ ಇಲಾಖೆ ವತಿಯಿಂದ ತರಬೇತಿಗೆ ಅನುಮತಿ ನೀಡಿದರೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ)ಗೆ ಸರ್ಕಾರದ ಆದೇಶ ಇನ್ನು ತಲುಪಿಲ್ಲ. ತರಬೇತಿ ಆರಂಭಿಸುವ ಕುರಿತು ಸೋಮವಾರ ಕೆಬಿಎ ಪದಾಧಿಕಾರಿಗಳು ಸಭೆ ಸೇರಲಿದ್ದು, ಬಳಿಕವಷ್ಟೇ ತರಬೇತಿಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

ಸೈಕ್ಲಿಂಗ್ ಆರಂಭ ಸರಾಗ: ಸರ್ಕಾರದ ಆದೇಶದ ಹೊರಬಿದ್ದ ಬೆನ್ನಲ್ಲೇ ವಿಜಯಪುರದಲ್ಲಿ ಸೈಕ್ಲಿಂಗ್ ಚಟುವಟಿಕೆಗೆ ಆರಂಭಗೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಸೈಕ್ಲಿಸ್ಟ್ ಗಳು ಅಭ್ಯಾಸ ನಡೆಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಅವರ ಪಾಡಿಗೆ ಅವರು ಅಭ್ಯಾಸ ಕೈಗೊಂಡಿದ್ದಾರೆ ಎನ್ನುತ್ತಾರೆ ಕರ್ನಾಟಕ ಅಮೆಚೂರು ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲ ಕುರಣಿ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕ್ರೀಡಾ ಹಾಸ್ಟೆಲ್​ನಲ್ಲಿದ್ದ ವಿದ್ಯಾರ್ಥಿಗಳು ಮನೆಗಳಿಗೆ ತೆರಳಿದ್ದು, ಅವರು ಇದ್ದಲ್ಲಿಯೇ ತರಬೇತಿ ಆರಂಭಿಸಿದ್ದಾರೆ. ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ ಮಾರ್ಗದರ್ಶನದಂತೆ ಸ್ಪರ್ಧೆಯ ವೇಳಾಪಟ್ಟಿ ಸಿದ್ಧಪಡಿಸಲಾಗುವುದು.

ಟೇಬಲ್ ಟೆನಿಸ್​ನಲ್ಲಿ ಜೂನಿಯರ್ಸ್​ಗಿಲ್ಲ ಎಂಟ್ರಿ: ಟೇಬಲ್ ಟೆನಿಸ್ ವಲಯದಲ್ಲಿ ಅಷ್ಟಾಗಿ ಉತ್ಸಾಹ ಕಂಡು ಬರುತ್ತಿಲ್ಲ. ಕೆಲವೊಂದು ಕ್ಲಬ್​ಗಳು ತರಬೇತಿ ಆರಂಭಿಸಿದ್ದರೂ ಕೇವಲ ಸೀನಿಯರ್ ಮಟ್ಟದ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆ ಆರಂಭಗೊಳ್ಳುವವರೆಗೂ ಜೂನಿಯರ್ ಮಟ್ಟದ ಆಟಗಾರರಿಗೆ ಅಭ್ಯಾಸ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕೆಎಸ್​ಸಿಎ ಯಥಾಸ್ಥಿತಿ: ಬಿಸಿಸಿಐ ಮಾರ್ಗದರ್ಶನ ದಂತೆ ಕಾರ್ಯನಿರ್ವಹಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ. ಈ ಕುರಿತು ಮಾರ್ಗಸೂಚಿಗಳನ್ನು ರಚಿಸಿಕೊಂಡಿರುವ ಕೆಎಸ್​ಸಿಎ, ಲಾಕ್​ಡೌನ್ 4.0 ಮುಕ್ತಾಯದವರೆಗೂ (ಮೇ 31) ಯಾವುದೇ ಚಟುವಟಿಕೆ ನಡೆಸದಿರಲು ನಿರ್ಧರಿಸಿದೆ.

ಗಾಲ್ಫ್​ ​ನಲ್ಲಿ ಕ್ಯಾಡಿಗಳಿಗಿಲ್ಲ ಪ್ರವೇಶ: ಗಾಲ್ಫ್​ ತರಬೇತಿ ಹಾಗೂ ಅಭ್ಯಾಸ ಶುಕ್ರವಾರದಿಂದ ಆರಂಭಗೊಂಡಿತು. ಆದರೆ, ಆಟಗಾರರ ಸಹಾಯಕರಾದ ಕ್ಯಾಡಿಗಳಿಗೆ ಅವಕಾಶ ನೀಡಲಾಗಿಲ್ಲ. ಜತೆಗೆ ಕ್ಲಬ್ ಹೌಸ್ ತೆರೆಯಲು ಅನುಮತಿ ನೀಡಲಾಗಿಲ್ಲ ಎಂದು ಕರ್ನಾಟಕ ಗಾಲ್ಫ್ ಸಂಸ್ಥೆ ಕಾರ್ಯದರ್ಶಿ ಪೃಥ್ವಿರಾಜ್ ಅರಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net