

Rohit Sharma: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮರನ್ನು ದಡೂತಿ ಕ್ರಿಕೆಟಿಗ, ತೂಕ ಇಳಿಸಿಕೊಳ್ಳಬೇಕು ಎಂದೆಲ್ಲಾ ಟೀಕಿಸಿ ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಇದೀಗ ತಮ್ಮ ಹೇಳಿಕೆಗಳಿಂದ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರನ್ನು ಟೀಕಿಸುವ ಭರದಲ್ಲಿ ವಿವಾದ ಸುಳಿಗೆ ಸಿಲುಕಿರುವ ಶಮಾ, ಸದ್ಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಕ್ಷದ ವಕ್ತಾರೆಯಾಗಿ ಇಂತಹ ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದು ಬಿಜೆಪಿ ಶಮಾ ವಿರುದ್ಧ ತೀವ್ರ ಕಿಡಿಕಾರಿದೆ. ಕ್ರಿಕೆಟ್ ಅಭಿಮಾನಿಗಳು ಕಾಂಗ್ರೆಸ್ ನಾಯಕಿಯನ್ನು ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಆಕೆಯ ಟೀಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕೂಡಲೇ ರೋಹಿತ್ ಶರ್ಮ ಅವರಿಗೆ ಕ್ಷಮೆಯಾಚಿಸಬೇಕು ಎಂದು ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ಒಂದೆಡೆ ಶಮಾ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದರೆ, ಮತ್ತೊಂದೆಡೆ, ಆಕೆಯ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಸಂಸದ ಸೌಗತಾ ರೇ ಸಮರ್ಥಿಸಿಕೊಂಡಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
"ಶಮಾ ಹೇಳಿದ ವಿಷಯದಲ್ಲಿ ತಪ್ಪೇನಿದೆ? ರೋಹಿತ್ ಶರ್ಮ ಅವರ ಪ್ರದರ್ಶನ ಕಳಪೆಯಾಗಿದೆ ಎಂದು ನಾನು ಕೇಳಿದ್ದೇನೆ. ಅವರು ಈವರೆಗೂ ಒಂದೇ ಒಂದು ಶತಕ ಗಳಿಸಿದ್ದಾರೆ. ಅದೊಂದು ಶತಕ ಹೊರತುಪಡಿಸಿ, ಉಳಿದೆಲ್ಲಾ ಪಂದ್ಯಗಳಲ್ಲಿ ಕೇವಲ 2, 3, 4 ಅಥವಾ 5 ರನ್ ಗಳಿಸಿ ಔಟಾಗಿದ್ದಾರೆ. ಅವರು ಭಾರತ ತಂಡದಲ್ಲಿ ಇರುವ ಅವಶ್ಯಕತೆ ಇಲ್ಲ. ತಂಡದ ಇತರ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಇವರ ಕೊಡುಗೆಯಿಂದ ಟೀಮ್ ಇಂಡಿಯಾ ಗೆಲ್ಲುತ್ತಿದೆಯೇ ವಿನಃ ರೋಹಿತ್ರಿಂದ ಅಲ್ಲ. ಈ ವಿಷಯದಲ್ಲಿ ಶಮಾ ಮೊಹಮ್ಮದ್ ಹೇಳಿದ್ದು ಸರಿಯಿದೆ" ಎಂದು ವಕ್ತಾರೆ ಪರ ಬ್ಯಾಟ್ ಬೀಸಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಗ್ರೂಪ್ ಹಂತದ ಪಂದ್ಯ ನಿನ್ನೆ (ಮಾ.02) ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 44 ರನ್ಗಳ ಭರ್ಜರಿ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮ ಆರಂಭದಲ್ಲಿಯೇ ಪತನ ಕಂಡರೂ, ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 249 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ವರುಣ್ ಚಕ್ರವರ್ತಿ ನೇತೃತ್ವದ ಬೌಲಿಂಗ್ ದಾಳಿಯು ಅದ್ಭುತ ಪ್ರದರ್ಶನ ನೀಡಿ, ಕಿವೀಸ್ ಬ್ಯಾಟಿಂಗ್ ತಂಡವನ್ನು 205 ರನ್ಗಳಿಗೆ ಆಲೌಟ್ ಮಾಡಿತು. (ಏಜೆನ್ಸೀಸ್).