ಇವನಿಗೆಲ್ಲೋ ಲೂಸು... ಅದಕ್ಕೆ ಹಿಂಗಾಡ್ತಾನೆ... ಲಾಕ್​ಡೌನ್​ ಮುಗಿದ ಮೇಲೆ ರಸ್ತೆಯಲ್ಲಿ ಓಡುತ್ತಲೇ ಇರುತ್ತಾನೆ... ನೋಡುತ್ತಿರಿ...

yazuvendra chahal
Published on

ನವದೆಹಲಿ: ರಾಷ್ಟ್ರಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್​ನಿಂದಾಗಿ 50 ದಿನಗಳಿಂದ ಮನೆಯಲ್ಲಿ ಕೂತಿರುವವರಿಗೆ ತುಂಬಾ ಬೋರಾಗುತ್ತಿದೆ. ಎಲ್ಲರೊಂದಿಗೂ ಕಲೆತುಬೆರೆತು, ಕಾಲೆಳೆದು ಮಜಾ ತೆಗೆದುಕೊಳ್ಳುವ ಪರಿಪಾಠ ಹೊಂದಿರುವ ಭಾರತ ಕ್ರಿಕೆಟ್​ ತಂಡದ ಸ್ಪಿನ್ನರ್​ ಯಜುವೇಂದ್ರ ಚಹಾಲ್​ ಕೂಡ ಇಂಥವರಲ್ಲಿ ಒಬ್ಬರು.

ಬೇಸರದಿಂದ ಹೊರಬರಲು ಸದಾ ಪ್ರಯತ್ನಿಸುತ್ತಲೇ ಇರುವ ಅವರು, ಟಿಕ್​ಟಾಕ್​ ವಿಡಿಯೋಗಳ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದ್ದರು. ಇದೀಗ ತಮ್ಮ ತಂಡದ ಸಹ ಆಟಗಾರರ ಸಂದರ್ಶನದಲ್ಲಿ ಮೂಗುತೂರಿಸುವ ಮೂಲಕ ಇಲ್ಲವೇ ಏನಾದರೂ ಕಮೆಂಟ್​ ಹಾಕುವ ಚೇಷ್ಟೆ ಮಾಡುತ್ತಾ ಬೇಸರದಿಂದ ಹೊರಬರಲು ಯತ್ನಿಸುತ್ತಿದ್ದಾರೆ. ತನ್ಮೂಲಕ ಅವರು ಮತ್ತೊಮ್ಮೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಚೇಟ್ರಿಯೊಂದಿಗೆ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಭಾನುವಾರ ಲೈವ್​ ಚಾಟ್​ ನಡೆಸಿದ್ದರು. ಯಾವುದೋ ಗಂಭೀರ ವಿಷಯ ಮಾತನಾಡುತ್ತಿದ್ದಾಗ, ಯಜುವೇಂದ್ರ ಚಹಾಲ್​ ದಿಢೀರನೆ ಏನೋ ಕಮೆಂಟ್​ ಹಾಕಿದರು.

ಇದನ್ನು ಗಮನಿಸಿದ ವಿರಾಟ್​ ಕೊಹ್ಲಿ ಹುಸಿಮುನಿಸು ತೋರುತ್ತಾ, ನೋಡಿ ಸ್ವಾಮಿ, ಚಹಾಲ್​ ಇಲ್ಲಿಗೂ ಬಂದ... ಈತ ಸುಧಾರಿಸುವಂತೆ ಕಾಣುತ್ತಿಲ್ಲ... ಎಂದು ಲಘುಧಾಟಿಯಲ್ಲಿ ಛೇಡಿಸಿದರು.

ಅಪ್ಪಾ ಮಹಾನುಭಾವ, ಸ್ವಲ್ಪ ಅರ್ಥ ಮಾಡಿಕೋ... ಎನ್ನುತ್ತಲೇ ಚೇಟ್ರಿಯತ್ತ ತಿರುಗಿ, ಈ ವ್ಯಕ್ತಿ ಪ್ರತಿಯೊಂದರಲ್ಲೂ ಮೂಗುತೂರಿಸುವ ಸ್ವಭಾವ ತೋರುತ್ತಿದ್ದಾನೆ... ಜನರು ಎಲ್ಲೆಲ್ಲಿ ಮಾತನಾಡುತ್ತಿರುತ್ತಾರೋ, ಅಲ್ಲಿಗೆಲ್ಲ ಹೋಗಿ ನನ್ನದೂ ಇರಲಿ ಎಂದು ಕಮೆಂಟ್​ ಹಾಕುವ ಚೇಷ್ಟೆ ಮಾಡುತ್ತಾನೆ... ಅಣ್ಣಾ ನಿಂದು ತುಂಬಾ ಆಯಿತು ಕಣೋ... ಲಾಕ್​ಡೌನ್​ ಸಂಪೂರ್ಣ ಮುಗಿದ ಬಳಿಕ ಈ ವ್ಯಕ್ತಿ ಸದಾ ರಸ್ತೆಯಲ್ಲಿ ಓಡುತ್ತಲೇ ಇರುತ್ತಾನೆ... ತನ್ನ ಟಿಕ್​ಟಾಕ್​ ಅನ್ನು ಆನ್​ ಮಾಡಿಕೊಂಡು ಓಡುತ್ತಲೇ ಇರುತ್ತಾನೆ... ಈತನಿಗೆ ಏನೋ ಆಗಿದೆ... ಏಲ್ಲೋ ಯಾವುದೋ ವೈರು ಸಡಿಲಗೊಂಡಂತೆ ಕಾಣುತ್ತೆ... ಬಹುಶಃ ಆತನ ದೇಹದ ಯಾವುದೋ ಭಾಗದಲ್ಲಿ ಶಾರ್ಟ್​ಸರ್ಕ್ಯೂಟ್​ ಆಗಿರಬೇಕು... ಎಂದು ಹಾಸ್ಯ ಮಾಡಿದ್ದಾರೆ.

ಇದಾದ ಬಳಿಕ ಹಾಸ್ಯದ ಲಹರಿಯಲ್ಲೇ ಮುಂದುವರಿವ ವಿರಾಟ್​ ಕೊಹ್ಲಿ, ಎರಡು ಕೈಗಳನ್ನು ಜೋಡಿಸಿ ಇನ್ನಾದರೂ ಬೇರೆಯವರ ಲೈವ್​ಚಾಟ್​ನಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸು ಮಹಾರಾಯ ಎಂದು ಚಹಾಲ್​ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊಹ್ಲಿ ಮಾತುಗಳನ್ನು ಕೇಳಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದ ಸುನಿಲ್​ ಚೇಟ್ರಿ, ಲಾಕ್​ಡೌನ್​ ತೆರವಾದ ಬಳಿಕ ನಾನು ಮನೆಗೇ ಹೋಗುವುದಿಲ್ಲ. ಬೇರೆ ಎಲ್ಲಾದರೂ ಇದ್ದುಬಿಡುವುದಾಗಿ ಹೇಳುವ ಚಹಾಲ್​ ಅವರ ಟಿಕ್​ಟಾಕ್​ ವಿಡಿಯೋವನ್ನು ನಾನು ನೋಡಿದ್ದೆ ಎಂದು ಹೇಳುತ್ತಾರೆ.

ಹಾಂ, ಹೌದಾ... ಇವನ ಟಿಕ್​ಟಾಕ್​ ವಿಡಿಯೋವನ್ನೆಲ್ಲಾ ನೋಡಿ... ಬಿಡಬೇಡಿ... ಈತನಿಗೆ 29 ವರ್ಷ ವಯಸ್ಸು... ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುತ್ತಾನೆ ಎಂದು ಹೇಳುವಂತೆಯೇ ಇಲ್ಲ... ಆ ವಿಡಿಯೋಗಳಲ್ಲಿ ಈತ ಅಕ್ಷರಶಃ ವಿದೂಷಕನೇ... ಎಂದು ಕೊಹ್ಲಿ ಅವರು ಚೇಟ್ರಿಗೆ ಸಲಹೆ ನೀಡುತ್ತಾರೆ.

ಈತ ನಮಗಷ್ಟೇ ಅಲ್ಲ, ಇತರೆ ರಾಷ್ಟ್ರಗಳ ಕ್ರಿಕೆಟ್​ ತಂಡದ ಸದಸ್ಯರಿಗೂ ಅದರಲ್ಲೂ ಆತನೊಂದಿಗೆ ಸಲುಗೆಯಲ್ಲಿರುವ ಆಟಗಾರರಿಗೂ ಭಾರಿ ಕಾಟ ಕೊಡುತ್ತಾನೆ... ನಿಮಗೆ ಹೇಳುತ್ತೇನೆ... ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ಗೆ ಮಧ್ಯರಾತ್ರಿ 1 ಗಂಟೆಗೆ ಫೋನ್​ ಮಾಡಿ ತಲೆತಿನ್ನುತ್ತಾನಂತೆ... ಎಂದು ಕೊಹ್ಲಿ ಹೇಳಿದಾಗ ಚೇಟ್ರಿ ಅವರ ನಗುವಿನ ಅಬ್ಬರ ಮತ್ತಷ್ಟು ಜೋರಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net