ಚಾಹಲ್-ಧನಶ್ರೀ ಸಂಬಂಧದಲ್ಲಿ ಬಿರುಕು ಮೂಡಲು ಇದೇ ಕಾರಣನಾ? ಸಾಕ್ಷಿಯು ಬಹಿರಂಗ?! Dhanashree Verma

Dhanashree Verma
Published on

Dhanashree Verma : ಕಳೆದ ಕೆಲವು ದಿನಗಳಿಂದ ಟೀಮ್​​ ಇಂಡಿಯಾದ ಸ್ಟಾರ್ ಸ್ಪಿನ್ನರ್​ ಯುಜುವೇಂದ್ರ ಚಾಹಲ್ ಹಾಗೂ ಅವರ ಪತ್ನಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್​ ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದೆಯಂತೆ. ಆದರೆ, ಈ ಸುದ್ದಿಗೆ ಚಾಹಲ್​ ಆಗಲಿ ಧನಶ್ರೀ ಆಗಲಿ ಇದುವರೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೂ ಇಬ್ಬರ ನಡೆ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.

ಚಾಹಲ್ ಮತ್ತು ಧನಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಚಾಹಲ್ ಅವರು ತಮ್ಮ ಪತ್ನಿಯೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. ಅಲ್ಲದೆ, ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದ ಮಾರ್ಮಿಕ ಪೋಸ್ಟ್​ ಕೂಡ ವಿಚ್ಛೇದನ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಕಠಿಣ ಪರಿಶ್ರಮವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಜೀವನದ ಪ್ರಯಾಣ ನಿಮಗೆ ಮಾತ್ರ ಗೊತ್ತಿದೆ. ನಿನ್ನ ನೋವು ನಿನಗೆ ತಿಳಿದಿರುತ್ತದೆ. ಈ ಹಂತಕ್ಕೆ ತಲುಪಲು ನೀವು ಏನೆಲ್ಲ ಮಾಡಿದ್ದೀರಿ ಎಂಬುದು ನಿಮಗೆ ಮಾತ್ರ ಗೊತ್ತಿರುತ್ತದೆ. ನೀವೀಗ ಎತ್ತರದಲ್ಲಿದ್ದೀರಿ. ನಿಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಉಳಿಯಿರಿ ಎಂದು ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿದರೆ, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗುತ್ತದೆ.

ಈ ಎಲ್ಲ ಬೆಳವಣಿಗೆ ನಡುವೆ ಧನಶ್ರೀಗೆ ಸಂಬಂಧಿಸಿದ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಚಾಹಲ್​ ಮತ್ತು ಧನಶ್ರೀ ಸಂಬಂಧದಲ್ಲಿ ಬಿರುಕು ಮೂಡಲು ಇದೇ ಕಾರಣ ಎನ್ನಲಾಗುತ್ತಿದೆ. ಧನಶ್ರೀ ಅವರ ವಿವಾಹೇತರ ಸಂಬಂಧವೇ ವಿಚ್ಛೇದನಕ್ಕೆ ಕಾರಣ ಎನ್ನುತ್ತಿರುವ ಕೆಲ ನೆಟ್ಟಿಗರು, ಅದಕ್ಕೆ ಪುಷ್ಟಿ ನೀಡುವಂತಹ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಈ ವದಂತಿಗಳ ನಡುವೆ ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್ ಅವರೊಂದಿಗೆ ಧನಶ್ರೀ ಇರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಝಲಕ್ ದಿಖ್ಲಾ ಜಾ ಶೋ ನಂತರದ ಪಾರ್ಟಿಯ ಸಮಯದಲ್ಲಿ ತೆಗೆದ ಫೋಟೋದಲ್ಲಿ ಪ್ರತೀಕ್​ ಮತ್ತು ಧನಶ್ರೀ ಕಪ್ಪು ಬಣ್ಣದ ಮ್ಯಾಚಿಂಗ್​ ಬಟ್ಟೆಗಳನ್ನು ಧರಿಸಿದ್ದಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಇದೇ ಚಾಹಲ್​ ಜತೆಗಿನ ವಿಭಜನೆಗೆ ಕಾರಣವಾಗಿರಬಹುದು ಎಂಬ ಊಹಾಪೋಹಗಳು ಕೂಡ ಹರಡಿವೆ.

ವೈವಾಹಿಕ ಜೀವನದ ವಿಚಾರದಲ್ಲಿ ಇಷ್ಟೆಲ್ಲ ವದಂತಿ ಮತ್ತು ಊಹಾಪೋಹಗಳು ಹರಿದಾಡುತ್ತಿದ್ದರೂ ಚಾಹಲ್​ ಆಗಲಿ ಧನಶ್ರೀಯಾಗಲಿ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ. ಚಾಹಲ್ ಅವರು ಇನ್​ಸ್ಟಾಗ್ರಾಂನಲ್ಲಿ​ ಪ್ರತಿನಿತ್ಯ ಮಾರ್ಮಿಕವಾಗಿ ಪೋಸ್ಟ್​ ಹಾಕುತ್ತಿದ್ದಾರೆ ಹೊರತು ಈ ವಿಚಾರದ ಬಗ್ಗೆ ನೇರವಾಗಿ ಏನೂ ಹೇಳುತ್ತಿಲ್ಲ. ಹೀಗಾಗಿ ವದಂತಿಗಳಿಗೆ ನಿತ್ಯವೂ ಇನ್ನಷ್ಟು ರೆಕ್ಕೆಪುಕ್ಕಗಳು ಸೇರಿಕೊಳ್ಳುತ್ತಿವೆ. ಇದರ ನಡುವೆ ಚಾಹಲ್​ ಕೂಡ ಬೇರೊಂದು ಯುವತಿಯ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಕೂಡ ಹರಡಿದೆ. ಈ ಪ್ರಕರಣದಲ್ಲಿ ಇನ್ನು ಏನೆಲ್ಲ ಬೆಳವಣಿಗೆ ನಡೆಯುತ್ತದೆಯೋ ಕಾದು ನೋಡಬೇಕಿದೆ. ಇನ್ನಷ್ಟು ವದಂತಿಗಳು ಹರಡಬಾರದು ಅಂದರೆ, ಧನಶ್ರೀ ಹಾಗೂ ಚಾಹಲ್​ ಅವರು ಆದಷ್ಟು ಬೇಗ ಒಂದು ಸ್ಪಷ್ಟನೆ ನೀಡಬೇಕಿದೆ.

ಅಂದಹಾಗೆ 2020ರ ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಾಹಲ್ ಮತ್ತು ಧನಶ್ರೀ ತಮ್ಮ ಸಿಹಿ ಕ್ಷಣಗಳನ್ನು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದರು. ಒಂದು ಸಮಯದಲ್ಲಿ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದ್ದ ಈ ಜೋಡಿ ಇದೀಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಶೀಘ್ರದಲ್ಲೇ ಇಬ್ಬರು ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.

ಅಂದಹಾಗೆ ಟೀಮ್​ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿಯಂತಹ ಕ್ರಿಕೆಟಿಗರು ಇಂತಹ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೀಗ ವಿಚ್ಛೇದನ ಪಡೆದರೆ ಚಾಹಲ್ ಕೂಡ ಆ ಪಟ್ಟಿಗೆ ಸೇರಲಿದ್ದಾರೆ. ಒಟ್ಟಿನಲ್ಲಿ ವೈಯಕ್ತಿಕ ಸಮಸ್ಯೆಗಳು ಚಾಹಲ್ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಸದ್ಯದಲ್ಲೇ ದಂಪತಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net