

Dhanashree Verma : ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹಾಗೂ ಅವರ ಪತ್ನಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದೆಯಂತೆ. ಆದರೆ, ಈ ಸುದ್ದಿಗೆ ಚಾಹಲ್ ಆಗಲಿ ಧನಶ್ರೀ ಆಗಲಿ ಇದುವರೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೂ ಇಬ್ಬರ ನಡೆ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.
ಚಾಹಲ್-ಧನಶ್ರೀ ಡಿವೋರ್ಸ್ ವದಂತಿ ಜೋರಾಗುತ್ತಿದ್ದಂತೆ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಹೆಸರು ಕೂಡ ಚರ್ಚೆಯಾಗುತ್ತಿದೆ. ಚಾಹಲ್ ಮತ್ತು ಶ್ರೇಯಸ್ ಇಬ್ಬರು ಯಶಸ್ವಿ ಕ್ರಿಕೆಟಿಗರು ಎಂಬುದು ಜಗತ್ತಿಗೆ ಗೊತ್ತಿದೆ. ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಭವಿಷ್ಯದಲ್ಲೂ ಯಶಸ್ಸನ್ನು ಎದುರು ನೋಡುತ್ತಿದ್ದಾರೆ. ಸದ್ಯ ಇಬ್ಬರು ಕ್ರಿಕೆಟ್ನಲ್ಲಿ ಬಿಜಿಯಾಗಿದ್ದು, ಚಾಹಲ್ ದಾಂಪತ್ಯ ಜೀವನದಲ್ಲಿ ಮೂಡಿದೆ ಎನ್ನಲಾದ ಬಿರುಕು ಶ್ರೇಯಸ್ ಹೆಸರನ್ನು ಸಹ ಎಳೆದುತಂದಿದೆ.
ಚಾಹಲ್ ಮತ್ತು ಧನಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಚಾಹಲ್ ಅವರು ತಮ್ಮ ಪತ್ನಿಯೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಮಾರ್ಮಿಕ ಪೋಸ್ಟ್ ಕೂಡ ವಿಚ್ಛೇದನ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಕಠಿಣ ಪರಿಶ್ರಮವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಜೀವನದ ಪ್ರಯಾಣ ನಿಮಗೆ ಮಾತ್ರ ಗೊತ್ತಿದೆ. ನಿನ್ನ ನೋವು ನಿನಗೆ ತಿಳಿದಿರುತ್ತದೆ. ಈ ಹಂತಕ್ಕೆ ತಲುಪಲು ನೀವು ಏನೆಲ್ಲ ಮಾಡಿದ್ದೀರಿ ಎಂಬುದು ನಿಮಗೆ ಮಾತ್ರ ಗೊತ್ತಿರುತ್ತದೆ. ನೀವೀಗ ಎತ್ತರದಲ್ಲಿದ್ದೀರಿ. ನಿಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಉಳಿಯಿರಿ ಎಂದು ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದರೆ, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗುತ್ತದೆ.
ಈ ಎಲ್ಲ ಬೆಳವಣಿಗೆ ನಡುವೆ ಶ್ರೇಯಸ್ ಅಯ್ಯರ್ ಹೆಸರು ಏಕೆ ಕೇಳಿಬರುತ್ತಿದೆ ಗೊತ್ತಾ? ಈ ಹಿಂದೆ ಧನಶ್ರೀ ವರ್ಮ ಜತೆ ಶ್ರೇಯಸ್ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ಲವ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇಬ್ಬರು ಜತೆಯಾಗಿ ಡಾನ್ಸ್ ಮಾಡುವ ವಿಡಿಯೋವೊಂದು ವೈರಲ್ ಆದ ಬಳಿಕ ಇಬ್ಬರ ನಡುವಿನ ಆಪ್ತತೆಯ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಅನೇಕ ಸಂದರ್ಭಗಳಲ್ಲಿ ಇಬ್ಬರು ಒಟ್ಟಿಗೆ ಕಾಣಸಿಕೊಂಡಿದ್ದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಚರ್ಚೆಗಳು ಶುರುವಾದವು. ಅಷ್ಟಕ್ಕೂ ಧನಶ್ರೀ ಮತ್ತು ಶ್ರೇಯಸ್ ನಡುವೆ ಇರುವ ಕನೆಕ್ಷನ್ ಏನು ಎಂದು ನೋಡಿದಾಗ ಶ್ರೇಯಸ್ ಸಹೋದರಿ ಶ್ರೇಷ್ಠಾ ಅಯ್ಯರ್ ಹೆಸರು ಕೇಳಿಬರುತ್ತದೆ.
ಶ್ರೇಷ್ಠಾ ಅಯ್ಯರ್ ಮತ್ತು ಧನಶ್ರೀ ವರ್ಮಾ ಇಬ್ಬರು ಆಪ್ತ ಸ್ನೇಹಿತರು. ಇಬ್ಬರು ಕೂಡ ಡಾನ್ಸ್ ಕೊರಿಯೋಗ್ರಾಫರ್ಸ್. ಈ ಒಂದು ಕಾರಣಕ್ಕೆ ಧನಶ್ರೀ ಮತ್ತು ಶ್ರೇಯಸ್ ನಡುವೆ ಪರಿಚಯವಿದೆ ಹೊರತು ಬೇರೆ ಯಾವುದೇ ಸಂಬಂಧವಿಲ್ಲ. ಇಬ್ಬರ ಬಗ್ಗೆ ಹರಿದಾಡುತ್ತಿರುವ ಡೇಟಿಂಗ್ ಸುದ್ದಿ ಕೇವಲ ವದಂತಿಯಷ್ಟೇ. ಹೇಳಬೇಕೆಂದರೆ, ಚಾಹಲ್ ಮತ್ತು ಶ್ರೇಯಸ್ ಕೂಡ ಒಳ್ಳೆಯ ಸ್ನೇಹಿತರು.
2020ರ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಾಹಲ್ ಮತ್ತು ಧನಶ್ರೀ ತಮ್ಮ ಸಿಹಿ ಕ್ಷಣಗಳನ್ನು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದರು. ಒಂದು ಸಮಯದಲ್ಲಿ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದ ಈ ಜೋಡಿ ಇದೀಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಶೀಘ್ರದಲ್ಲೇ ಇಬ್ಬರು ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.
ಅಂದಹಾಗೆ ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿಯಂತಹ ಕ್ರಿಕೆಟಿಗರು ಇಂತಹ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೀಗ ವಿಚ್ಛೇದನ ಪಡೆದರೆ ಚಾಹಲ್ ಕೂಡ ಆ ಪಟ್ಟಿಗೆ ಸೇರಲಿದ್ದಾರೆ. ಒಟ್ಟಿನಲ್ಲಿ ವೈಯಕ್ತಿಕ ಸಮಸ್ಯೆಗಳು ಚಾಹಲ್ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಸದ್ಯದಲ್ಲೇ ದಂಪತಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. (ಏಜೆನ್ಸೀಸ್)