ತೊದಲು ಮಾತು, ನಡಗುವ ಕೈಗಳು... ನಟ ವಿಶಾಲ್​ಗೆ ಏನಾಯಿತು? ವೈದ್ಯರು ಕೊಟ್ಟ ಉತ್ತರ ಇಲ್ಲಿದೆ... Actor Vishal

Actor Vishal
Published on

Actor Vishal: ಕಾಲಿವುಡ್​ ಸೂಪರ್​ಸ್ಟಾರ್​ ವಿಶಾಲ್​ಗೆ ಸಂಬಂಧಿಸಿದ ವಿಡಿಯೋವೊಂದು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ಭಾರಿ ಚರ್ಚೆ ಹುಟ್ಟುಹಾಕಿದೆ. ಏಕೆಂದರೆ, ವಿಶಾಲ್​ ಅವರು ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ಕಾಣುತ್ತದೆ. ಮೈಕ್​ ಹಿಡಿದು ಮಾತನಾಡುವಾಗ ಕೈ ನಡುಗುತ್ತಿರುವುದು ಮತ್ತು ಮಾತುಗಳು ತೊದಲಿಸುತ್ತಿರುವುದು ವಿಡಿಯೋದಲ್ಲಿದೆ. ಹೀಗಾಗಿ ವಿಶಾಲ್​ಗೆ ಏನಾಗಿದೆ ಎಂಬ ಪ್ರಶ್ನೆ ಮೂಡಿದೆ.

ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟರಾಗಿರುವ ವಿಶಾಲ್, 12 ವರ್ಷಗಳ ಹಿಂದೆ ಮದಗಜರಾಜ ಎಂಬ ಚಿತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದೀಗ ಮುಂಬರುವ ಪೊಂಗಲ್ ಹಬ್ಬದಂದು ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಂದರ್​ ಸಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವರಲಕ್ಷ್ಮೀ ಶರತ್​ಕುಮಾರ್​, ಅಂಜಲಿ ಹಾಗೂ ಸಂತಾನಮ್​ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.

2013ರ ಪೊಂಗಲ್‌ಗೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತು. ಇದೀಗ 12 ವರ್ಷಗಳ ನಂತರ ಪೊಂಗಲ್‌ಗೆ ಚಿತ್ರ ತೆರೆಕಾಣುತ್ತಿದೆ. ನಿನ್ನೆ ಚೆನ್ನೈನಲ್ಲಿ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಈ ವೇಳೆ ನಟ ವಿಶಾಲ್, ನಿರ್ದೇಶಕ ಸುಂದರ್​ ಸಿ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶಾಲ್ ಅವರು ಮೈಕ್ ಹಿಡಿಯಲು ಸಾಧ್ಯವಾಗದೆ ನಡುಗುವ ಕೈಗಳಿಂದಲೇ ತೊದಲುತ್ತಾ ಮಾತನಾಡಿದರು. ಅಲ್ಲದೆ, ಅವರ ದೇಹ ತುಂಬಾ ತೆಳ್ಳಗೆ ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿ ಅಭಿಮಾನಿಗಳು ಶಾಕ್​ ಆಗಿದ್ದರು ಮತ್ತು ವಿಶಾಲ್​ಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು.

ಸದ್ಯ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿದೆ. ಅದರ ಪ್ರಕಾರ ನಟ ವಿಶಾಲ್​ಗೆ ವೈರಲ್ ಜ್ವರ ಇರುವುದು ದೃಢಪಟ್ಟಿದೆ. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ಅಪೋಲೋ ಆಸ್ಪತ್ರೆ ವರದಿಯಲ್ಲಿ ತಿಳಿಸಲಾಗಿದೆ.

ವಿಶಾಲ್​ ಅವರಿಗೆ ಗಂಭೀರವಾದ ಸಮಸ್ಯೆ ಏನಿಲ್ಲ. ಜ್ವರದಿಂದ ಮಾತ್ರ ಬಳಲುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿಯೂ ಬಳಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ತಿಳಿದ ಅಭಿಮಾನಿಗಳು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net