ಸಾಕಷ್ಟು ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಮಲಗುವ ಮುನ್ನ ಈ ಆಹಾರಗಳನ್ನು ತಪ್ಪದೇ ಸೇವಿಸಿ! Sleeping

Sleeping
Published on

Sleep : ಆರೋಗ್ಯಕರ ಜೀವನಕ್ಕೆ ಆಹಾರ ಸೇವನೆಯಷ್ಟೇ ನಿದ್ದೆಯೂ ಬಹಳ ಮುಖ್ಯ. ಹೊಟ್ಟೆ ತುಂಬ ತಿಂದು ಗಡತ್ತಾಗಿ ನಿದ್ದೆ ಹೊಡೆಯಿರಿ ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೀರಿ. ನಿದ್ದೆ ಮತ್ತು ಆಹಾರದಲ್ಲಿ ಸಮತೋಲನ ಕಾಪಾಡಿಕೊಂಡರೆ ನಿಮ್ಮ ಬಳಿ ಯಾವ ಆರೋಗ್ಯ ಸಮಸ್ಯೆಯು ಸುಳಿಯುವುದಿಲ್ಲ. ಇಲ್ಲವಾದಲ್ಲಿ ಸಾಕಷ್ಟು ಸಮಸ್ಯೆಗಳು ಬಾದಿಸುತ್ತವೆ.

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು. ಉತ್ತಮ ನಿದ್ರೆಯು ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಅಲ್ಲದೆ, ನಿಮ್ಮ ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ. ಇದರಿಂದ ನೀವು ಉತ್ತಮ ಭಾವನೆಯವನ್ನು ಹೊಂದುವಿರಿ. ಒಂದು ವೇಳೆ ಸಮರ್ಪಕ ನಿದ್ರೆಯಾಗದಿದ್ದಲ್ಲಿ ಅದರ ಪರಿಣಾಮ ದಿನವಿಡೀ ಇರುತ್ತದೆ. ಯಾವ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ ಮತ್ತು ದೇಹ ದಣಿದಿರುವಂತೆ ಭಾಸವಾಗುತ್ತದೆ. ಹೀಗಾಗಿ ದಿನಕ್ಕೆ 7 ರಿಂದ 8 ಗಂಟೆ ನಿದ್ರೆ ಮಾಡಲೇಬೇಕು.

ಕೆಲವರು ಸರಿಯಾಗಿ ನಿದ್ದೆ ಮಾಡಲು ತೊಂದರೆ ಅನುಭವಿಸುತ್ತಾರೆ. ಹಾಸಿಗೆ ಅಥವಾ ಚಾಪೆಯಲ್ಲಿ ನಿದ್ರೆಗಾಗಿ ಒದ್ದಾಡುತ್ತಾರೆ. ಸಾಕಷ್ಟು ಸಮಯ ಕಳೆದ ಬಳಿಕ ನಿದ್ರೆ ಜಾರುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳನ್ನು ಬದಿಗಿಟ್ಟು, ಉತ್ತಮ ನಿದ್ರೆಗೆ ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ನಾವು ತಿಳಿದುಕೊಳ್ಳೋಣ.

ಬಾದಾಮಿ

ಬಾದಾಮಿಯು ಸಾಕಷ್ಟು ಪ್ರಮಾಣದ ವಿಟಮಿನ್ ಬಿ ಮತ್ತು ಮೆಗ್ನೀಸಿಯಂ ಹೊಂದಿರುತ್ತದೆ. ಇದರಿಂದ ನಿದ್ರೆ ಸುಲಭವಾಗಿ ಬರುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾದಾಮಿಯನ್ನು ಸೇರಿಸುವುದು ತುಂಬಾನೇ ಒಳ್ಳೆಯದು. ಬಾದಾಮಿ ತಿನ್ನುವುದರಿಂದ ನಿದ್ರೆಯನ್ನು ಉಂಟುಮಾಡುವ ಮೆಲಟೋನಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಬೆಚ್ಚಗಿನ ಹಾಲು

ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ರಾತ್ರಿಯಲ್ಲಿ ಉಗುರುಬೆಚ್ಚಗಿನ ಹಾಲನ್ನು ನೀಡಲಾಗುತ್ತದೆ. ಹಾಲಿನಲ್ಲಿ ಟ್ರಿಪ್ಟೊಫಾನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇದೆ. ನಿದ್ರಿಸಲು ತೊಂದರೆ ಇರುವವರು ಹಾಲು ಕುಡಿಯುವುದು ಒಳ್ಳೆಯದು. ಆದಾಗ್ಯೂ, ಕಡಿಮೆ ಕೊಬ್ಬಿನ ಹಾಲನ್ನು ಕುಡಿಯುವುದು ಉತ್ತಮ.

ಕಿವಿ ಹಣ್ಣು

ಕಿವಿ ಹಣ್ಣುಗಳು ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ರಾತ್ರಿ ಮಲಗುವ ಮುನ್ನ ಇವುಗಳನ್ನು ತಿನ್ನುವುದರಿಂದ ಉತ್ತಮ ನಿದ್ದೆಯನ್ನು ಪಡೆಯಬಹುದು. ಇದರೊಂದಿಗೆ ಕಿವಿ ಹಣ್ಣುಗಳು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ.

ಮೀನು

ಸಾಲ್ಮನ್, ಟ್ಯೂನಾ ಮತ್ತು ಮ್ಯಾಕೆರೆಲ್‌ನಂತಹ ಮೀನುಗಳು ವಿಟಮಿನ್ ಡಿ ಅನ್ನು ಹೊಂದಿರುತ್ತವೆ. ಅಲ್ಲದೆ, ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇವು ಮಿದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net