540 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 18 ವರ್ಷದ ಯುವತಿ ದುರಂತ ಸಾವು! ಫಲ ನೀಡದ ರಕ್ಷಣಾ ಕಾರ್ಯ | Borewell Tragedy

Borewell Tragedy
Published on

Borewell Tragedy : 540 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 18 ವರ್ಷದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಗುಜರಾತಿನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 33 ಗಂಟೆಗಳಿಗೂ ಹೆಚ್ಚು ಸಮಯ ಎನ್​ಡಿಆರ್​ಎಫ್​ ಮತ್ತು ಬಿಎಸ್​ಎಫ್​ ಸಿಬ್ಬಂದಿ ನಡೆಸಿದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ.

ಮೃತ ಯುವತಿಯನ್ನು ಇಂದ್ರ ಮೀನಾ ಎಂದು ಗುರುತಿಸಲಾಗಿದೆ. ಕಚ್ ಜಿಲ್ಲೆಯ ಭುಜ್ ತಾಲೂಕಿನ ಕಂಡೆರೈ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. 540 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಯುವತಿ, 490 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು.

ಅಧಿಕಾರಿಗಳ ಪ್ರಕಾರ, ಕೊಳವೆ ಬಾವಿಯು ಒಂದು ಅಡಿ ವ್ಯಾಸವನ್ನು ಹೊಂದಿದೆ. ಬಾವಿಯ ಆಳದಲ್ಲಿ ಸಿಲುಕಿಕೊಂಡಿದ್ದರಿಂದ ರಕ್ಷಣಾ ಪ್ರಯತ್ನಗಳು ತುಂಬಾ ಕಷ್ಟಕರವಾಯಿತು. ಸಂಜೆ 4 ಗಂಟೆ ಸುಮಾರಿಗೆ ಯುವತಿಯನ್ನು ಹೊರಗೆ ತಂದು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ದುರದೃಷ್ಟವಶಾತ್, ಯುವತಿ ಬದುಕುಳಿಯಲಿಲ್ಲ ಎಂದು ಭುಜ್‌ನ ಜಿಕೆ ಜನರಲ್ ಆಸ್ಪತ್ರೆಯ ವೈದ್ಯರು ಘೋಷಿಸಿದರು.

ಯುವತಿಯನ್ನು "ಹುಕ್ ತಂತ್ರ" ಬಳಸಿ ಹೊರಗೆ ಕರೆತರಲಾಯಿತು. ಎಲ್ ಮತ್ತು ಜೆ-ಆಕಾರದ ಕೊಕ್ಕೆಗಳನ್ನು ಬೋರ್‌ವೆಲ್‌ಗೆ ಇಳಿಸಿ, ಎರಡು ಬದಿಗಳಲ್ಲಿ ಅಳವಡಿಸಿ, ಕೆಳಗಿನಿಂದ ಒತ್ತಡವನ್ನು ಹಾಕಿ ಯುವತಿಯನ್ನು ಮೇಲಕ್ಕೆ ಎಳೆಯಲಾಯಿತು. ಈ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಂಡಗಳು ನಡೆಸಿದವು. ಭುಜ್ ಪುರಸಭೆಯ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ತುರ್ತು ಸ್ಪಂದನಾ ತಂಡ, ಪೊಲೀಸರು ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಯುವತಿ ಕೊಳವೆ ಬಾವಿಗೆ ಬಿದ್ದಿದ್ದರಿಂದ ಸಾವು ಸಂಭವಿಸಿದೆಯೇ? ಅಥವಾ ಇದರ ಹಿಂದೆ ಏನಾದರೂ ಪಿತೂರಿ ಇದೆಯೇ? ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ನಿಜವಾದ ಕಾರಣ ತಿಳಿಯಬಹುದು ಎನ್ನಲಾಗುತ್ತಿದೆ. ಮೃತ ಯುವತಿ ರಾಜಸ್ಥಾನದ ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದವಳು. ಯುವತಿಯು ಬೋರ್‌ವೆಲ್‌ಗೆ ಬಿದ್ದಿರುವ ಸುದ್ದಿಯ ಬಗ್ಗೆ ಅಧಿಕಾರಿಗಳು ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. 10 ದಿನಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ಹೊರಕ್ಕೆ ತರಲಾಯಿತು. ಆದರೂ ಬದುಕಿಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಐದು ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದನು. ಈ ವೇಳೆ ರಕ್ಷಣಾ ಕಾರ್ಯಾಚರಣೆ 55 ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಆದರೆ, ಹೊರ ತೆಗೆಯುವಷ್ಟರಲ್ಲಿ ಬಾಲಕ ಜೀವನ್ಮರಣ ಹೋರಾಟದಲ್ಲಿ ಸೋತಿದ್ದ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net