

ಬ್ರಿಸ್ಬೇನ್: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ದಿನದಾಟದವರೆಗೆ ಫಲಿತಾಂಶ ಕುತೂಹಲ ಉಳಿಸಿಕೊಂಡಿದೆ. ಪ್ರಮುಖ ಬೌಲರ್ಗಳ ಗೈರಿನಲ್ಲಿ ವೇಗಿಗಳಾದ ಮೊಹಮದ್ ಸಿರಾಜ್ (73ಕ್ಕೆ 5) ಮತ್ತು ಶಾರ್ದೂಲ್ ಠಾಕೂರ್ (61ಕ್ಕೆ 4) ತೋರಿದ ಕೆಚ್ಚೆದೆಯ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹೇರಿದ್ದು, ಗೆಲುವಿಗೆ 328 ರನ್ಗಳ ಸವಾಲಿನ ಗುರಿ ಪಡೆದಿದೆ. ನಾಲ್ಕನೇ ದಿನದಾಟದಲ್ಲಿ ಭಾರತದ ಚೇಸಿಂಗ್ಗೆ ಮಳೆ ಅಡಚಣೆ ತಂದಿದ್ದು, ಅಂತಿಮ ದಿನವೂ ಮಳೆ ಕಾಡುವ ಭೀತಿ ಇದೆ. ಇದರಿಂದಾಗಿ ಸೋಲು-ಗೆಲುವಿಗಿಂತ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿದ್ದು, ಭಾರತ ತಂಡ ಟ್ರೋಫಿ ಉಳಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡುವ ನಿರೀಕ್ಷೆಯೂ ಹೆಚ್ಚಾಗಿದೆ.
ಗಾಬಾ ಮೈದಾನದಲ್ಲಿ ನಡೆಯುತ್ತಿರುವ ನಿರ್ಣಾಯಕ ಕಾದಾಟದಲ್ಲಿ ಸೋಮವಾರ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸೀಸ್, ಚಹಾ ವಿರಾಮದ ಬಳಿಕ 294 ರನ್ಗೆ ಸರ್ವಪತನ ಕಂಡಿತು. ಬಳಿಕ ಸವಾಲು ಬೆನ್ನಟ್ಟಲು ಕಣಕ್ಕಿಳಿದ ಭಾರತ ತಂಡ 1.5 ಓವರ್ ಎದುರಿಸಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಮತ್ತೆ ಆಟ ನಡೆಯದೆ ದಿನದಾಟಕ್ಕೆ ತೆರೆಬಿದ್ದಿತು. ಆರಂಭಿಕರಾದ ರೋಹಿತ್ ಶರ್ಮ 4 ರನ್ ಗಳಿಸಿ ಮತ್ತು ಶುಭಮಾನ್ ಗಿಲ್ ಖಾತೆ ತೆರೆಯದೆ ಕ್ರೀಸ್ನಲ್ಲಿದ್ದಾರೆ.
ಭಾರತ ತಂಡ ಇನ್ನು ಪಂದ್ಯ ಗೆದ್ದು ಸರಣಿಯನ್ನು 2-1ರಿಂದ ಒಲಿಸಿಕೊಳ್ಳಬೇಕಾದರೆ ಅಂತಿಮ ದಿನದಾಟದ 98 ಓವರ್ಗಳಲ್ಲಿ 3.3ರ ಸರಾಸರಿಯಲ್ಲಿ 324 ರನ್ ಗಳಿಸಬೇಕಾಗಿದೆ. ಆಸೀಸ್ ಗೆಲುವಿಗೆ 10 ವಿಕೆಟ್ ಅಗತ್ಯವಿದೆ. ಪಂದ್ಯ ಡ್ರಾಗೊಂಡರೆ ಸರಣಿ 1-1 ಸಮಬಲದಲ್ಲಿ ಕೊನೆಗೊಳ್ಳಲಿದೆ. ಆಗ, 2018-19ರಲ್ಲಿ ಆಸೀಸ್ನಲ್ಲೇ ನಡೆದ ಕೊನೇ ಸರಣಿಯಲ್ಲಿ 2-1ರಿಂದ ಗೆದ್ದಿದ್ದ ಭಾರತ ತಂಡವೇ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ.
ಆಸೀಸ್ಗೆ ಸಿರಾಜ್-ಶಾರ್ದೂಲ್ ಕಡಿವಾಣ
ಅನನುಭವಿ ವೇಗಿಗಳಾದ ಮೊಹಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಮ್ಮಲ್ಲೇ 9 ವಿಕೆಟ್ಗಳನ್ನು ಹಂಚಿಕೊಳ್ಳುವ ಮೂಲಕ ಆಸ್ಟ್ರೇಲಿಯಾವನ್ನು 300ರೊಳಗೆ ಕಟ್ಟಿಹಾಕಿದರು. ಆರಂಭಿಕರನ್ನು ಬೇರ್ಪಡಿಸಲು ಭಾರತ ತಂಡ ದಿನದ 19ನೇ ಓವರ್ವರೆಗೂ ತಡಕಾಡಿತ್ತು. ಮೊದಲ ವಿಕೆಟ್ಗೆ 89 ರನ್ ಸೇರಿಸಿದಾಗ ಮಾರ್ಕಸ್ ಹ್ಯಾರಿಸ್ (38) ವಿಕೆಟ್ ಕಬಳಿಸುವ ಮೂಲಕ ಶಾರ್ದೂಲ್ ದಿನದ ಮೊದಲ ಯಶ ಒದಗಿಸಿದರು. ಬೆನ್ನಲ್ಲೇ, ಸರಣಿಯ ಮೊದಲ ಅರ್ಧಶತಕದ ಗಡಿಯಲ್ಲಿದ್ದ ಡೇವಿಡ್ ವಾರ್ನರ್ (48) ಸ್ಪಿನ್ನರ್ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು. ಆಗ ಜತೆಗೂಡಿದ ಲಬುಶೇನ್-ಸ್ಟೀವನ್ ಸ್ಮಿತ್ ಜೋಡಿ ಭಾರತಕ್ಕೆ ಮತ್ತೊಮ್ಮೆ ಸವಾಲಾಗುವ ಭೀತಿ ಸೃಷ್ಟಿಸಿತು. ಸರಣಿಯ ಅತ್ಯಧಿಕ ರನ್ಸ್ಕೋರರ್ ಲಬುಶೇನ್ (25) ವಿಕೆಟ್ ಕಬಳಿಸುವ ಮೂಲಕ ಸಿರಾಜ್ ಈ ಆತಂಕ ದೂರ ಮಾಡಿದರು. ಬೆನ್ನಲ್ಲೇ ಮ್ಯಾಥ್ಯೂ ವೇಡ್ಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ಸ್ಟೀವನ್ ಸ್ಮಿತ್ ಮತ್ತು ಕ್ಯಾಮರಾನ್ ಗ್ರೀನ್ 5ನೇ ವಿಕೆಟ್ಗೆ 73 ರನ್ ಸೇರಿಸಿ, ಮತ್ತೆ 23.4 ಓವರ್ಗಳ ಕಾಲ ಭಾರತ ವಿಕೆಟ್ಗಾಗಿ ಪರದಾಡುವಂತೆ ಮಾಡಿದರು. ಸ್ಮಿತ್ (55) ಅರ್ಧಶತಕ ಪೂರೈಸಿದ ಬಳಿಕ ಸಿರಾಜ್ ಈ ಜೋಡಿಯನ್ನೂ ಬೇರ್ಪಡಿಸಿದರು. ಮೊತ್ತ 200ರ ಗಡಿ ದಾಟಿದ ಬಳಿಕ ಗ್ರೀನ್ಗೆ (37) ಶಾರ್ದೂಲ್ ಪೆವಿಲಿಯನ್ ದಾರಿ ತೋರಿದರು. ಕೆಲ ಸರದಿಯಲ್ಲಿ ಟಿಮ್ ಪೇನ್ (27), ಪ್ಯಾಟ್ ಕಮ್ಮಿನ್ಸ್ (28*) ಮತ್ತು ನಾಥನ್ ಲ್ಯಾನ್ (13) ಭಾರತಕ್ಕೆ ಪ್ರತಿರೋಧ ಒಡ್ಡಿದರೂ, ಅವರು ಮೊತ್ತವನ್ನು ಇನ್ನಷ್ಟು ಏರಿಸದಂತೆ ಶಾರ್ದೂಲ್-ಸಿರಾಜ್ ತಡೆದರು.
ಆಸ್ಟ್ರೇಲಿಯಾ: 369 ಮತ್ತು 75.5 ಓವರ್ಗಳಲ್ಲಿ 294 (ವಾರ್ನರ್ 48, ಹ್ಯಾರಿಸ್ 38, ಲಬುಶೇನ್ 25, ಸ್ಮಿತ್ 55, ಗ್ರೀನ್ 37, ಪೇನ್ 27, ಕಮ್ಮಿನ್ಸ್ 28*, ಲ್ಯಾನ್ 13, ಸಿರಾಜ್ 73ಕ್ಕೆ 5, ಶಾರ್ದೂಲ್ 61ಕ್ಕೆ 4, ವಾಷಿಂಗ್ಟನ್ 80ಕ್ಕೆ 1), ಭಾರತ: 336 ಮತ್ತು 1.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 4 (ರೋಹಿತ್ 4*, ಗಿಲ್ 0*).