

ಕರಾಚಿ: ಭಾರತದ ದಿಗ್ಗಜ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಪಾಕಿಸ್ತಾನಕ್ಕೆ ಮಾದರಿಯಾಗಬೇಕು ಎಂದು ಮಾಜಿ ನಾಯಕ ಹಾಗೂ ಆಲ್ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣಗಳು ಹೀಗಿವೆ...
ಲಾಹೋರ್ನಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ, ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆಯರು ಕೂಡ ರಾಹುಲ್ ದ್ರಾವಿಡ್ ಅವರ ಹಾದಿಯಲ್ಲೇ ಸಾಗಬೇಕು. ಈ ಮೂಲಕ ಪಾಕಿಸ್ತಾನದಲ್ಲೂ ಯುವ ಕ್ರಿಕೆಟಿಗರ ಬೆಳವಣಿಗೆಗೆ ನೆರವಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃನಾಲ್-ಹಾರ್ದಿಕ್ ಪಾಂಡ್ಯ ಸಹೋದರರಿಗೆ ಪಿತೃವಿಯೋಗ
ರಾಹುಲ್ ದ್ರಾವಿಡ್ ಅವರು ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವ ಮೂಲಕ ಭಾರತದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಅಪಾರವಾದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ 2016ರಿಂದ 2019ರವರೆಗೆ ಅವರು ಭಾರತದ 19 ವಯೋಮಿತಿ ತಂಡ ಮತ್ತು ಭಾರತ ಎ ತಂಡಗಳ ಕೋಚ್ ಆಗಿಯೂ ಯುವ ಕ್ರಿಕೆಟಿಗರ ಬೆಳವಣಿಗೆಗೆ ನೆರವಾಗಿದ್ದರು.
‘ಪಾಕಿಸ್ತಾನ ಈಗ ಗುಣಮಟ್ಟದ ಕ್ರಿಕೆಟಿಗರ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ನಮ್ಮಲ್ಲೂ ಮಾಜಿ ದಿಗ್ಗಜ ಕ್ರಿಕೆಟಿಗರು ಯುವ ಪ್ರತಿಭೆಗಳನ್ನು ಸೂಕ್ತ ರೀತಿಯಲ್ಲಿ ಬೆಳೆಸುವ ಕೆಲಸದಲ್ಲಿ ಭಾಗಿಯಾಗಬೇಕು. ಅವರಿಂದ ಯುವ ಕ್ರಿಕೆಟಿಗರಿಗೆ ಸಾಕಷ್ಟು ನೆರವಾಗಬಲ್ಲುದು’ ಎಂದು 43 ವರ್ಷದ ಅಫ್ರಿದಿ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಅವರ ರೀತಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆಯರಾದ ಇಂಜಮಾಮ್ ಉಲ್ ಹಕ್, ಯೂನಿಸ್ ಖಾನ್ ಮತ್ತು ಮೊಹಮದ್ ಯೂಸುಫ್ ಕಾರ್ಯನಿರ್ವಹಿಸಬೇಕು ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.