ಅಗಲಿದ ತಂದೆಗೆ ಭಾವನಾತ್ಮಕ ಅಕ್ಷರನಮನ ಸಲ್ಲಿಸಿದ ಹಾರ್ದಿಕ್ ಪಾಂಡ್ಯ

pandya father web
Published on

ಬೆಂಗಳೂರು: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಹೃದಯಾಘಾತದಿಂದ ಭಾನುವಾರ ಮೃತಪಟ್ಟ ತಂದೆ ಹಿಮಾಂಶು ಪಾಂಡ್ಯ ಅವರಿಗೆ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ. ತಂದೆಯ ಅಗಲಿಕೆ ತಾನು ಜೀವನದಲ್ಲಿ ಅರಗಿಸಿಕೊಳ್ಳಬೇಕಾದ ಅತ್ಯಂತ ಕಠಿಣ ಸಂಗತಿ ಎಂದು ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ. ಜತೆಗೆ ತಂದೆಯ ಜತೆಗಿನ ಸ್ಮರಣೀಯ ನೆನಪುಗಳ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

‘ನನ್ನ ಡ್ಯಾಡಿ ಮತ್ತು ನನ್ನ ಹೀರೋಗೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರಹವನ್ನು ಆರಂಭಿಸಿರುವ ಹಾರ್ದಿಕ್ ಪಾಂಡ್ಯ, ‘ನಿಮ್ಮನ್ನು ಕಳೆದುಕೊಂಡಿರುವುದು, ನಾನು ಜೀವನದಲ್ಲಿ ಒಪ್ಪಿಕೊಳ್ಳಬೇಕಾಗಿರುವ ಅತ್ಯಂತ ಕಠಿಣ ವಿಷಯವಾಗಿದೆ. ಆದರೆ ನೀವು ನಮಗೆ ಸಾಕಷ್ಟು ಶ್ರೇಷ್ಠ ನೆನಪುಗಳನ್ನು ನೀಡಿ ಹೋಗಿದ್ದೀರಿ. ನಾವು ಅವುಗಳನ್ನು ಕೇವಲ ನಗುವಿನಿಂದಲೇ ಮೆಲುಕು ಹಾಕಬಹುದಾಗಿದೆ. ನಿಮ್ಮ ಪುತ್ರರು ಈಗ ಎಲ್ಲಿ ನಿಂತಿದ್ದಾರೋ, ಅದು ಸಾಧ್ಯವಾಗಿರುವುದು ನಿಮ್ಮಿಂದಲೇ, ನಿಮ್ಮ ಕಠಿಣ ಪರಿಶ್ರಮದಿಂದಲೇ ಮತ್ತು ನಿಮ್ಮ ಆತ್ಮವಿಶ್ವಾಸದಿಂದಲೇ ಆಗಿದೆ. ನೀವು ಯಾವಾಗಲೂ ಸಂತೋಷದಿಂದಲೇ ಇರುತ್ತಿದ್ದಿರಿ’ ಎಂದು ಬರೆದುಕೊಂಡಿದ್ದಾರೆ.

‘ಈ ಮನೆ ನೀವಿಲ್ಲದೆ ಕಡಿಮೆ ಮನರಂಜನೆ ಹೊಂದಿರಲಿದೆ. ನಾವು ನಿಮ್ಮನ್ನು ಪ್ರೀತಿಸುತ್ತಿದ್ದೆವು ಮತ್ತು ಎಂದೆಂದಿಗೂ ಪ್ರೀತಿಸುತ್ತೇವೆ. ನಿಮ್ಮ ಹೆಸರು ಯಾವಾಗಲೂ ಉತ್ತುಂಗದಲ್ಲಿಯೇ ಇರುತ್ತದೆ. ಒಂದು ಸಂಗತಿ ನನಗೆ ತಿಳಿದಿದೆ, ನೀವು ಇಲ್ಲಿದ್ದಾಗ ಯಾವ ರೀತಿ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದಿರೋ, ಅದೇ ರೀತಿ ಮೇಲಿನಿಂದಲೂ ಕಾಳಜಿ ತೋರುತ್ತೀರಿ. ನೀವು ನಮ್ಮ ಬಗ್ಗೆ ಹೆಮ್ಮೆ ಹೊಂದಿದ್ದಿರಿ. ಆದರೆ ಅಪ್ಪಾ, ನಾವೆಲ್ಲರೂ ಕೂಡ ನೀವು ಬದುಕಿದ ರೀತಿಯ ಬಗ್ಗೆ ಹೆಮ್ಮೆ ಹೊಂದಿದ್ದೇವೆ. ನಿನ್ನೆಯಷ್ಟೇ ಕೊನೆಯ ಪ್ರಯಾಣದ ವೇಳೆ ನಾನು ಹೇಳಿದಂತೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನನ್ನ ಕಿಂಗ್. ನನ್ನ ಜೀವನದ ಪ್ರತಿದಿನವೂ ನಾನಿನ್ನು ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಲವ್ ಯೂ ಡ್ಯಾಡಿ’ ಎಂದು ಹಾರ್ದಿಕ್ ಪಾಂಡ್ಯ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net