ಅಶಿಸ್ತಿನ ಕಾರಣಕ್ಕೆ ಭಾರತಕ್ಕೆ ವಾಪಸ್​; ಶುಭಮನ್​ ಗಿಲ್​ ಕೊಟ್ಟ ಸ್ಪಷ್ಟನೆ ಹೀಗಿದೆ

Rohit Gill
Published on

ನವದೆಹಲಿ: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವ ಸಮರದಲ್ಲಿ ಟೀಮ್​ ಇಂಡಿಯಾ ಯಶಸ್ವಿಯಾಗಿ ಸೂಪರ್​ 8 ಹಂತಕ್ಕೆ ಲಗ್ಗೆ ಇಟ್ಟಿದ್ದು, ಇದರ ಮಧ್ಯೆ ಶಿಸ್ತಿನ ವಿಚಾರವಾಗಿ ಇಬ್ಬರ ಆಟಗಾರರನ್ನು ಭಾರತಕ್ಕೆ ವಾಪಸ್​ ಕಳುಹಿಸಲಾಗುತ್ತಿದೆ ಏಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಶುಭಮನ್​ ಗಿಲ್​ ಹಾಗೂ ಆವೇಶ್​ ಖಾನ್​ ಶಿಸ್ತು ಪಾಲಿಸಲಿಲ್ಲ ಎಂಬ ಕಾರಣಕ್ಕೆ ಈ ಇಬ್ಬರು ಆಟಗಾರರನ್ನು ಭಾರತಕ್ಕೆ ವಾಪಸ್​ ಕಳುಹಿಸಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶುಭಮನ್​ ಗಿಲ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸಮಿ ಹಾಗೂ ನಾನು ರೋಹಿತ್​ ಅವರಿಂದ ಶಿಸ್ತಿನ ಪಾಠವನ್ನು ಕಲಿಯುತ್ತಿದ್ದೇವೆ ಎಂದು ಬರೆದುಕೊಳ್ಳುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಮೂಲಕ ಶುಭಮನ್​ ಗಿಲ್​ ತಮ್ಮ ವಿರುದ್ಧ ಯಾವುದೇ ತರಹದ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Shubman Story

ಈ ಕುರಿತು ಮಾತನಾಡಿದ ಟೀಮ್​ ಇಂಡಿಯಾ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋಡ್​, ಬೇರೆ ಕಾರಣಕ್ಕೆ ಗಿಲ್​ ಹಾಗೂ ಆವೇಶ್​ ಖಾನ್​ರನ್ನು ವಾಪಸ್​ ಕಳುಹಿಸಲಾಗಿದೆ. ಆ ಇಬ್ಬರನ್ನು ಹಿಂದಕ್ಕೆ ಕಳುಹಿಸಿರುವುದು ದುಡುಕಿನ ನಿರ್ಧಾರವಲ್ಲ. ಇದೊಂದು ಪೂರ್ವಯೋಜಿತ ಯೋಜನೆ. ಭಾರತ ತಂಡ ವೆಸ್ಟ್ ಇಂಡೀಸ್‌ಗೆ ಆಗಮಿಸಿದಾಗ, ಮ್ಯಾನೇಜ್‌ಮೆಂಟ್ ಇಬ್ಬರು ಮೀಸಲು ಆಟಗಾರರನ್ನು ಮಾತ್ರ ಇರಿಸಿಕೊಳ್ಳಲು ನಿರ್ಧರಿಸಿತು.

ಅಮೆರಿಕದಲ್ಲಿದ್ದಾಗ ನಾಲ್ಕು ಟ್ರಾವೆಲಿಂಗ್ ರಿಸರ್ವ್ ಆಟಗಾರರನ್ನು ಹೊಂದಬೇಕು ಮತ್ತು ಕೆರಿಬಿಯನ್‌ಗೆ ಹೋಗುವಾಗ ಇಬ್ಬರು ಆಟಗಾರರನ್ನು ಬಿಡುಗಡೆ ಮಾಡಬೇಕು ಎಂದು ನಾವು ಯೋಚಿಸಿದ್ದೆವು. ಈಗ ಆ ಯೋಜನೆಯ ಪ್ರಕಾರ ಶುಭಮನ್ ಮತ್ತು ಅವೇಶ್ ಅವರನ್ನು ವಾಪಸ್ ಕಳುಹಿಸಲಾಗಿದೆ. ಅಮೆರಿಕದ ಮೈದಾನದಲ್ಲಿ ಆಟಗಾರರಿಗೆ ಗಾಯಗಳಾಗುವ ಸಾಧ್ಯತೆಯಿರುವುದರಿಂದ ನಾಲ್ವರು ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಭಾರತ ಸೂಪರ್-8 ತಲುಪಿರುವುದರಿಂದ ಯಾವುದೇ ತೊಂದರೆಯಾಗದಂತೆ ಆ ಇಬ್ಬರನ್ನು ವಾಪಸ್ ಕಳುಹಿಸಲು ನಿರ್ಧರಿಸಿದ್ದೇವೆ ಎಂದು ವಿಕ್ರಮ್ ರಾಥೋಡ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net